ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪಾದಯಾತ್ರೆ
ಕೋಲಾರ: ತಿರುಮಲ ತಿರುಪತಿಗೆ ಪಾದಯಾತ್ರೆ ಕೈಗೊಂಡಿರುವ ರಾಜ್ಯದ ವಿವಿಧ ಕಡೆಯ ಸುಮಾರು 300 ಭಕ್ತರು ಮಂಗಳವಾರ ಕೋಲಾರ ಮೂಲಕ ಪ್ರಯಾಣ ಮುಂದುವರೆಸಿದ್ದಾರೆ.
ನ.17ರಂದು ಪಾದಯಾತ್ರೆ ಆರಂಭಿಸಿದ ತಂಡದಲ್ಲಿ ಬೆಂಗಳೂರು, ಚಾಮರಾಜನಗರ, ಮೈಸೂರು, ಕೊಳ್ಳೆಗಾಲ, ತುಮಕೂರು ಸೇರಿದಂತೆ ವಿವಿಧ ಕಡೆಯ ಭಕ್ತರು ಇದ್ದಾರೆ.
ತಿರುಮಲ ತಿರುಪತಿ ಪಾದಯಾತ್ರೆ ಸೇವಾ ಕೈಂಕರ್ಯ ಟ್ರಸ್ಟ್ ವತಿಯಿಂದ ಪ್ರತಿವರ್ಷ ಈ ರೀತಿಯ ಕಾರ್ಯಕ್ರಮ ನಡೆಯುತ್ತಿದ್ದು ಪಾದಯಾತ್ರೆ ಸೇವೆ ಈಗ 36ನೇ ವರ್ಷಕ್ಕೆ ಕಾಲಿಟ್ಟಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರತಿವರ್ಷ ಪಾದಯಾತ್ರೆಗೆ ಮೂರು ತಿಂಗಳ ಮುಂಚೆ ಟ್ರಸ್ಟಿನ ಪದಾಧಿಕಾರಿಗಳು ಸಮೀಕ್ಷೆ ನಡೆಸಿ ಸಿದ್ಧತೆ ಕೈಗೊಳ್ಳುವರು. ಅನೇಕರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಮಾರ್ಗ ಮಧ್ಯ ಅನೇಕರು ಊಟ-ತಿಂಡಿ, ತಂಗಲು ಜಾಗ ನೀಡಲಿದ್ದಾರೆ. ಭಕ್ತರು ಪ್ರತಿದಿನ ವಿಷ್ಣು ಸ್ತೋತ್ರ ಪಠನೆ ಹಾಗೂ ಭಜನೆಗಳ ಮೂಲಕ ಪಾದಯಾತ್ರೆಯಲ್ಲಿ ಗಮನ ಸೆಳೆಯಲಿದ್ದಾರೆಂದು ವಿವಿರ ನೀಡಿದರು. ಕೋಲಾರದಲ್ಲಿ ಮಂಗಳವಾರ ಯಾತ್ರಿಕರಿಗೆ ಬಿ.ಆರ್. ಚನ್ನಪ್ಪ ಮತ್ತು ಸಹೋದರರು ಊಟದ ವ್ಯವಸ್ಥೆ ಮಾಡಿದ್ದರು. ತಂಬಿಹಳ್ಳಿ ಮಠದಲ್ಲಿ ಯಾತ್ರಿಕರಿಗೆ ವಿಶ್ರಾಂತಿ ಹಾಗೂ ದೇವರ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೇ ರೀತಿ ಮಾರ್ಗದುದ್ದಕ್ಕೂ ಅನೇಕರು ಸಹಾಯ ಮಾಡಲು ಸಿದ್ಧರಾಗಿದ್ದಾರೆಂದರು.
ದಿನಕ್ಕೆ 40 ಕಿಮೀ ನಡೆಯುತ್ತೇವೆ. ರಾತ್ರಿ ಯಾತ್ರೆ ಇರುವುದಿಲ್ಲ, ಮಳೆ ಬಂದಲ್ಲಿ ಮಾರ್ಗಮದ್ಯ ಸಿಗುವ ಶಾಲಾ ಅವರಣ, ಸಮುದಾಯ ಭವನ, ದೇವಾಲಯ ಆವರಣ ಇಲ್ಲವೇ ದಾನಿಗಳ ಮನೆಯಲ್ಲಿ ಉಳಿದುಕೊಂಡು ಮಳೆ ನಿಂತ ನಂತರ ಮತ್ತೆ ಪ್ರವಾಸ ಮುಂದುವರೆಸುವುದಾಗಿ ಹೇಳಿದ್ದಾರೆ.
ಪಾದಯಾತ್ರೆಯಲ್ಲಿ ಯಾವುದೇ ಸಮಸ್ಯೆ ಬರದಂತೆ ಟ್ರಸ್ಟಿಗಳಾದ ಶರ್ಮ, ಎಸ್.ಸಿ. ನಟರಾಜು, ಗುರುರಾಜು, ನಾಗರಾಜರಾವ್, ಹೆಚ್.ಟಿ. ಜಯರಾಮ್, ಪ್ರಸಾದ್ ಇನ್ನಿತರರು ಉಸ್ತುವಾರಿ ವಹಿಸಿದ್ದು ನ.25 ರಂದು ತಿರುಪತಿ ಪ್ರವೇಶ ಮಾಡಿ ಮತ್ತೆ ಅಲ್ಲಿಂದ ಮೆಟ್ಟಲು ಸೇವೆ ಆರಂಭಿಸಿ ನ.27 ರಂದು ದೇವರ ದರ್ಶನ ಪಡೆದು ಅಲ್ಲಿಂದ ರೈಲು ಮೂಲಕ ಮತ್ತೆ ಬೆಂಗಳೂರಿಗೆ ವಾಪಸ್ ಆಗುವುದಾಗಿ ತಿಳಿಸಿದ್ದಾರೆ.