ದೌರ್ಜನ್ಯ ನಿಯಂತ್ರಣ ಸಭೆಯಲ್ಲಿ ಗೊಂದಲ
ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರ ಮೇಲೆ ನಡೆಯುವ ದೌರ್ಜನ್ಯ ನಿಯಂತ್ರಣದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರ ಸಭೆಯಲ್ಲಿ ಸಮರ್ಪಕವಾಗಿ ಸಮಸ್ಯೆಗಳನ್ನು ಚರ್ಚಿಸದೇ ಕೇವಲ ನಾಮಕಾವಸ್ತೆಗೆ ಸಭೆಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಕೆಲ ಕಾಲ ಸಭೆಯಿಂದ ದೂರ ಉಳಿದ ದಲಿತ ಮುಖಂಡರು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿದರು.
ಹಳೆಯ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವಿಶಾಲ್ ನೆತೃತ್ವದಲ್ಲಿ ಅಟ್ರಾಸಿಟಿ ಸಭೆ ಆಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಪರಿಹಾರ ನೀಡಬೇಕು. ಆದರೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಸಭೆಯಲ್ಲಿ ಆರೋಪಿಸಿದ ಮುಖಂಡರು, ಬಡ ಕೃಷಿಕ ದಲಿತರಿಗೆ ಸಾಗುವಳಿ ಚೀಟಿ, ವಸತಿ ರಹಿತರಿಗೆ ಮನೆ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಪ್ರಕಾರವಾಗಿ ಕೆಲಸ ಮಾಡಬೇಕಾಗುತ್ತದೆ.ಈ ಬಗ್ಗೆ ಚರ್ಚೆ ಮಾಡುವುದು ಬೇಡ ಎಂಬ ಉತ್ತರಕ್ಕೆ ಆಕ್ರೋಶಗೊಂಡ ದಲಿತ ಮುಖಂಡ ಕೆ.ಸಿ. ರಾಜಾಕಾಂತ್, ಸು.ಧಾ. ವೆಂಕಟೇಶ್ ಮತ್ತಿತರರು ಸಭೆ ಬಹಿಷ್ಕರಿಸಿ ಸಭಾಂಗಣದಲ್ಲಿಯೇ ಅಡ್ಡ ಕುಳಿತು ಪ್ರತಿಭಟನೆ ನಡೆಸಿದರು. ಕಾಟಾಚಾರದ ಸಭೆಗಳನ್ನು ನಡೆಸುವುದಾದರೂ ಯಾವ ಪುರುಷಾರ್ಥಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಜಿಲ್ಲಾಧಿಕಾರಿ ವಿಶಾಲ್ ಪ್ರತಿಭಟನಾ ನಿರತ ದಲಿತ ಮುಖಂಡರನ್ನು ಸಮಾಧಾನಪಡಿಸಿ ಮತ್ತೆ ಸಭೆ ನಡೆಯುವಂತೆ ಮಾಡಿದರು.
ದೌರ್ಜನ್ಯಕ್ಕೆ ಸೂಕ್ತ ಕ್ರಮ: 2007 ರಿಂದ 2013 ರವರೆಗೂ ದಾಖಲಾಗಿರುವ 53 ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 5 ಪ್ರಕರಣಗಳು ತನಿಖೆ ಹಂತದಲ್ಲಿದ್ದು ಉಳಿದ 47 ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ತಿಳಿಸಿದರು.
ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡಾಗ ಮೊದಲು ಸೂಕ್ತ ತನಿಖೆ ನಡೆಸಿ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯದ ಪ್ರಕರಣವೋ ಅಲ್ಲವೋ ಎಂಬುದನ್ನು ನಿರ್ಧರಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಲ್ಲದೇ ಶೋಷಿತರಿಗೆ ಕಾನೂನು ಪ್ರಕಾರ ಪರಿಹಾರ ಕೊಡಲಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಿವಪ್ರಸಾದ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜಪ್ಪ, ಬಾಲಕುಂಟೆ ಗಂಗಾಧರ್, ಜೀವಿಕ ಸಂಘಟನೆಯ ರತ್ನಮ್ಮ ಇದ್ದರು.
ಉಪನ್ಯಾಸ ಕಾರ್ಯಕ್ರಮ
ಚಿಂತಾಮಣಿ: ಪಟ್ಟಣದ ಹಳೇ ಸಂತೆ ಮೈದಾನದ ಶಿಶುವಿಹಾರ ಮಂದಿರದಲ್ಲಿ ದಿ.ವೈ.ಎಸ್. ಗುಂಟಪ್ಪನವರು ಸ್ಥಾಪಿಸಿರುವ ಸಾಹಿತ್ಯಕೂಟದಲ್ಲಿ 23 ರ ಸಂಜೆ 6.30 ಕ್ಕೆ ಪ್ರವಚನಕಾರ ತಳಗವಾರ ಆನಂದ್ರಿಂದ ಉಪನ್ಯಾಸ ಏರ್ಪಡಿಸಲಾಗಿದೆ.