ನಿಧಿಗಾಗಿ ಮೂರು ತಿಂಗಳ ಹಿಂದೆ ಹಸುಗೂಸು ಬಲಿ?
-ವಿಶೇಷ ವರದಿ
ಸುಬ್ರಹ್ಮಣ್ಯ: ಇಲ್ಲಿನ ಚಾರ್ಮತ ಎಂಬಲ್ಲಿ ಹಾಲುಗಲ್ಲದ ಹೆಣ್ಣು ಮಗು ಸಾರಿಕ ಮೃತಪಟ್ಟು ಮೂರು ತಿಂಗಳಾಯಿತು. ಆದರೂ ಆ ಮನೆಯಲ್ಲಿ ಸೂತಕದ ಛಾಯೆ ಇನ್ನೂ ಮಾಸಿಲ್ಲ. ಈ ಮಗುವಿನ ಅಸಹಜ ಸಾವಿನ ಕುರಿತು ಇದ್ದ ಸಂಶಯಗಳಿಗೆ ಇದೀಗ ರೆಕ್ಕೆಪುಕ್ಕ ಹುಟ್ಟಿಕೊಂಡಿದ್ದು, ಮಗುವನ್ನು ವಾಮಾಚಾರಕ್ಕೆ ಬಳಸಲಾಗಿದೆ ಎಂಬ ಶಂಕೆಗೆ ಮತ್ತಷ್ಟು ಬಲ ಬಂದಿದೆ.
ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಯಲೇ ಬೇಕು ಎಂಬ ಒತ್ತಡ ಹೆತ್ತವರಿಂದ ಮತ್ತು ಸ್ಥಳೀಯರಿಂದ ವ್ಯಕ್ತವಾಗುತ್ತಿವೆ.
ನಡುಗಲ್ಲು ಸಮಿಪದ ಚಾರ್ಮತ ಕೋಡ್ತುಗಳಿ ಮೋಹನದಾಸ- ಭವಾನಿ ದಂಪತಿಯ ಹೆಣ್ಣು ಮಗು ಸಾರಿಕ (1 ವರ್ಷ 11 ತಿಂಗಳು) ಕಳೆದ ಆಗಸ್ಟ್‌ನಲ್ಲಿ ನಾಗರಪಂಚಮಿ ದಿನದಂದು ಕಣ್ಮರೆಯಾಗಿತ್ತು. ಮನೆಯಲ್ಲಿದ್ದ ಅಜ್ಜಿ ಮಡಿಲಿನಲ್ಲಿ ಮಗುವನ್ನು ಬಿಟ್ಟು ತಾಯಿ ಸಂಘದ ಸಭೆಗೆಂದು ತೆರಳಿದ್ದರು. ತಂದೆ ಕೆಲಸಕ್ಕೆಂ ಹೊರಗೆ ಹೋಗಿದ್ದರು. ಅಜ್ಜಿ ಜತೆ ಅಂಗಳದಲ್ಲಿ ಆಟವಾಡುತಿದ್ದ ಹಸುಳೆ ಮಧ್ಯಾಹ್ನ 1.30ರ ವೇಳೆಗೆ ನಾಪತ್ತೆಯಾಗಿತ್ತು. ಮನೆ ಮುಂದೆ ಸುಮಾರು 100 ಮೀ. ದೂರದಲ್ಲಿ ಚಿಕ್ಕ ಹೊಳೆ ಹರಿಯುತ್ತಿದ್ದು, ಮಗು ಅಲ್ಲಿ ಕೊಚ್ಚಿ ಹೋಗಿರಬಹುದು ಎಂದು ಹುಡುಕಲಾಯಿತು. ಎಲ್ಲಿಯೂ ಸಾರಿಕಾ ಪತ್ತೆಯಾಗದ ಕಾರಣ ಪೊಲೀಸರಿಗೆ ಮಗು ನಾಪತ್ತೆಯಾಗಿರುವ ಬಗ್ಗೆ ಹೆತ್ತವರು ದೂರು ನೀಡಿದ್ದರು. ಮಗುವನ್ನು ವಾಮಾಚಾರಕ್ಕೆ ಬಲಿ ಕೊಡಲು ಅಪಹರಿಸಿದ್ದಿರಬಹುದೆಂಬ ಶಂಕೆ ಆವತ್ತೇ ದಟ್ಟವಾಗಿ ಹಬ್ಬಿತ್ತು. ಆದರೆ ಪೊಲೀಸರು ಮಾತ್ರ ಮಗು ನೀರಿನಲ್ಲಿಯೇ ಕೊಚ್ಚಿ ಹೋಗಿದೆ ಎಂದೇ ವಾದಿಸಿದ್ದರು.
ಮಗುವಿನ ಶವ ಪತ್ತೆ: ಮಗುವಿನ ಶವ 13 ದಿನಗಳ ಬಳಿಕ ಮನೆಗೆ ಸುಮಾರು 2 ಕಿ.ಮೀ. ದೂರದ ಜೇನು ಕೋಡಿ ಎಂಬಲ್ಲಿ ಹೊಳೆಯಲ್ಲಿ ಪತ್ತೆಯಾಯಿತು. ಸ್ಥಳೀಯರೊಬ್ಬರು ಗಾಳ ಹಾಕುವ ಸಂದರ್ಭದಲ್ಲಿ ಅಡಕೆ ಸಲಾಕೆಯ ಮೇಲೆ ಮಲಗಿಸಿದ ಮಗುವಿನ ಶವ ಪತ್ತೆಯಾಗಿತ್ತು. ಆದರೆ, ಅದು ಕೊಳೆತ ಸ್ಥಿತಿಯಲ್ಲಿ ಇರಲಿಲ್ಲ. ಶವದ ತಲೆ ಮತ್ತು ಬಲ ಕೈ ಇರಲಿಲ್ಲ. ಶವವನ್ನು ಕಂಡ ಸ್ಥಳೀಯರು, ಇದು ಇತ್ತೀಚೆಗೆ ತಂದು ಹಾಕಿದ ಹಾಗೆ ಕಂಡುಬರುತ್ತಿದೆ ಮತ್ತು 13 ದಿನಗಳಲ್ಲಿ ಶವ ಈ ರೀತಿ ಹಸಿ ಹಸಿಯಾಗಿರಲು ಸಾಧ್ಯವೇ ಇಲ್ಲ ಎಂಬ ಬಗ್ಗೆ ಸಂಶಯ ವ್ಯಕ್ತಪಡಿದ್ದರು.
ಬಾಳುಗೋಡು ಗ್ರಾಮದ ಕಿರಿಭಾಗ ರಕ್ಷಿತಾರಣ್ಯದ ರತ್ನಾಪುರ ಎಂಬಲ್ಲಿ ಪುರಾತನ ದೇವಾಲಯ ಇತ್ತೆನ್ನಲಾದ ಜಾಗದಲ್ಲಿ ವಾಮಚಾರದ ಮೂಲಕ ನಿಧಿ ತೆಗೆಯಲಾಗಿದೆ. ಇದಕ್ಕೆ ನರ ಬಲಿ ಕೊಡಲಾಗಿದೆ ಎಂಬ ಶಂಕೆ ಇದ್ದು, ಇದೇ ಜಾಗದಲ್ಲಿ ವಾಮಾಚಾರಕ್ಕೆ ಬಳಸಿದ ಪೂಜಾ ಸಾಮಗ್ರಿಗಳು ಕುರುಹು ರೂಪದಲ್ಲಿ ಕಂಡುಬಂದಿವೆ. ಹಾಗಾಗಿ ಮಗುವನ್ನು ದುಷ್ಕರ್ಮಿಗಳು ಬಲಿ ಕೊಟ್ಟಿರಬಹುದು ಎಂಬ ಶಂಕೆ ವ್ಯಾಪಕವಾಗಿತ್ತು.
ಈ ಪ್ರಕರಣದ ಬಗ್ಗೆ ಉನ್ನತ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಯಬೇಕು ಎಂಬ ಕೂಗು ಹೆಚ್ಚಾಗಿದೆ.