ಬಂಜೆತನ ತಪಾಸಣಾ ಶಿಬಿರ
ಚಿಂತಾಮಣಿ: ಬಂಜೆತನ ಶಾಪವಲ್ಲ ಸೂಕ್ತ ಮಾರ್ಗದರ್ಶನ ಪಡೆದು ಮಕ್ಕಳ ಭಾಗ್ಯ ಪಡೆಯಬಹುದೆಂದು ಸ್ತ್ರೀ ರೋಗ ತಜ್ಞ ಡಾ.ಆಶಾ.ಎಸ್. ವಿಜಯ್ ಹೇಳಿದರು. ಪಟ್ಟಣದ ಎನ್.ಆರ್. ಬಡಾವಣೆಯ ಕನ್ನಿಕಾ ಮಹಲ್ನಲ್ಲಿ ಗರ್ಭಗುಡಿ(ಐ.ವಿ.ಎಫ್) ಸಂಸ್ಥೆಯಿಂದ ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ನಡೆದ ಬಂಜೆತನ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಮಕ್ಕಳಿಲ್ಲದ ದಂಪತಿಗಳು ವೈದ್ಯರ ಸಲಹೆ ಸೂಚನೆ ಪಡೆದು ಮಕ್ಕಳ ಭಾಗ್ಯ ಪಡೆಯಲು ಮಾಹಿತಿ ನೀಡಿದರು. ಡಾ.ಸಿರಿ.ವಿ. ರಾಘವೇಂದ್ರ ಬಂಜೆತನದ ಬಗ್ಗೆ ದಂಪತಿಗಳು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದರು. ಶಿಬಿರದಲ್ಲಿ ತಾಲೂಕಿನ 80 ಕ್ಕೂ ಹೆಚ್ಚು ದಂಪತಿಗಳು ಭಾಗವಹಿಸಿ ಉಚಿತ ಔಷಧಿ ಪಡೆದರು. ಶಬಿರದ ವ್ಯವಸ್ಥಾಪಕ ವಿಜಯ್ಕುಮಾರ್, ನಿರ್ದೇಶಕ ಪುಷ್ಪಲತ, ಹರಿ, ಹೇಮಂತ್, ಪೈಝುಲ್ಲಾ ಇದ್ದರು.
ವಕೀಲರ ಭವನಕ್ಕೆ ರು. 5 ಲಕ್ಷ
ಚಿಂತಾಮಣಿ: ವಕೀಲರ ಭವನಕ್ಕೆ 5 ಲಕ್ಷ ಅನುದಾನ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಎಚ್.ಎ. ಶಿವಯೋಗಿಸ್ವಾವು ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಕೀಲರ ಭವನದ ನಿರ್ಮಾಣಕ್ಕೆ ಸಂಬಂಧಿಸಿ ವಕೀಲರ ಜೊತೆ ಚರ್ಚಿಸಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ 2013-14 ನೇ ಸಾಲಿನ ಅನುದಾನ 5 ಲಕ್ಷ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶ ಪತ್ರ ನೀಡಿದರು. ವಕೀಲರ ಸಂಘದ ಪದಾಧಿಕಾರಿಗಳು ಶ್ಲಾಘಿಸಿ ಮುಂದಿನ ದಿನಗಳಲ್ಲಿ ವಕೀಲರ ಭವನಕ್ಕೆ ಇನ್ನಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಲು ಮನವಿ ಮಾಡಿದರು. ನಗರಸಭಾ ಸದಸ್ಯ ಸುಜಾತಮ್ಮಶಿವಣ್ಣ, ಹಿರಿಯ ವಕೀಲರಾದ ಜಿ.ಎಂ. ಇಬ್ರಾಹಿಂ, ಶ್ರೀನಿವಾಸ್, ಬೈರೆಡ್ಡಿ ಮತ್ತು ನಾ. ಶಂಕರ್, ವಿಜಯ್ ಇದ್ದರು.
ಇಂದು ಕನಕ ಜಯಂತಿ
ಕೋಲಾರ: ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕನಕದಾಸರ 525ನೇ ಜಯಂತ್ಯುತ್ಸವವನ್ನು ನ.20 ರಂದು ಬೆಳಿಗ್ಗೆ 10.30 ಕ್ಕೆ ಕನಕ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ರವರು ನೆರವೇರಿಸುವರು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮೆರವಣಿಗೆ ಉದ್ಘಾಟಿಸಲಿದ್ದು, ಶಾಸಕ ವರ್ತೂರು ಆರ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಪಂ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಸಿ.ನಾರಾಯಣಮೂರ್ತಿ ಭಾಗವಹಿಸುವರು.
ಸಹಕಾರ ಸಂಸ್ಕೃತಿ ಉತ್ತೇಜನ ದಿನ
ಕೋಲಾರ: ರಾಜ್ಯ ಸಹಕಾರ ಮಹಾ ಮಂಡಳ ನಿ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಆಶ್ರಯದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಕೃತಿ ಮತ್ತು ಮೌಲ್ಯಗಳ ಉತ್ತೇಜನ ದಿನವನ್ನು ನ.20 ಬೆಳಿಗ್ಗೆ 10.30ಕ್ಕೆ ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಕಾರ್ಯಕ್ರಮ ಉದ್ಘಾಟನೆ ಹಾಗೂ ನಾಮಫಲಕ ಅನಾವರಣ ಮಾಡಲಿದ್ದಾರೆ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಎನ್. ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಸಹಕಾರ ಯೂನಿಯನ್ನ್ನಿರ್ದೇಶಕ ಬ್ಯಾಲಹಳ್ಳಿ ಎಂ. ಗೋವಿಂದಗೌಡ ರವರಿಂದ ಸಮಾರೋಪ ಭಾಷಣ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿದೋದ್ದೇಶ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಕೆ.ಎಸ್. ಗಣೇಶ್ ಪತ್ರಕರ್ತರಿಗೆ ಯಶಸ್ವಿನಿ ಕಾರ್ಡು ವಿತರಿಸುವರು.
ಸಹಸ್ರ ದೀಪೋತ್ಸವ
ಮಾಲೂರು: ಕಾರ್ತಿಕ ಹುಣ್ಣಿಮೆ ಅಂಗವಾಗಿ ಸ್ಥಳೀಯ ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ ಶಂಕರನಾರಾಯಣ ದೇವಾಲಯದ ಸಾಯಿ ಭಜನೆ ಮಂದಿರದಲ್ಲಿ ಸಹಸ್ರ ದೀಪೋತ್ಸವ ಎರ್ಪಡಿಸಿತ್ತು. ಪಟ್ಟಣದ ನೂರಾರು ಮಹಿಳೆಯರು ತಂದ ಹಣತೆಗಳಿಂದ ದೀಪಗಳನ್ನು ಬೆಳಗಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಟ್ರಸ್ಟ್ನ ಕಾರ್ಯದರ್ಶಿ ಶ್ರೀನಿವಾಸ್ರೆಡ್ಡಿ, ಸಂಸ್ಕೃತಿ ಶಾಂತಿಯ ಸಂಕೇತವಾಗಿದ್ದು, ಪ್ರತಿಯೊಬ್ಬರು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ನೆಮ್ಮದಿ, ಶಾಂತಿ ಪಡೆಯಬೇಕು ಎಂದರು. ನಂತರ ಶಿರಡಿ ಸೇವಾ ಟ್ರಸ್ಟ್ವತಿಯಿಂದ ಸಾಯಿಬಾಬಾ ಭಜನೆ ನಡೆಯಿತು. ಟ್ರಸ್ಟ್ನ ಮುನಿಕೃಷ್ಣಪ್ಪ, ಸಫಾರಿ ಕೃಷ್ಣಪ್ಪ, ಸಿ. ನರಸಿಂಹ, ಎನ್. ಮಂಜುನಾಥ್, ಎಸ್. ಚೇತನ್, ವಿ. ರವಿ ಇದ್ದರು.
'ಕನ್ನಡದ ಬಗ್ಗೆ ಜಾಗೃತಿ ಮೂಡಿಸಿ'
ಚಿಕ್ಕಬಳ್ಳಾಪುರ: ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಮಾತೃಭಾಷೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಿಗೆ ಹಮ್ಮಿಕೊಳ್ಳಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಾಣಾಧಿಕಾರಿ ಶ್ರೀಕಂಠ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಮಂಚನಬಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅನನ್ಯ ಕಲಾ ರಂಗ ವೇದಿಕೆ ವತಿಯಿಂದ 58 ನೇ ಕನ್ನಡ ರಾಜೋತ್ಸವ ಅಂಗವಾಗಿ ಆಯೋಜಿಸಿದ್ದ ಕನ್ನಡ ಜಾಗೃತಿ ಗೀತೆಗಳ ಗೀತಾ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಪ್ರತಿಯೊಬ್ಬರು ಕೈ ಜೋಡಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ತಾಪಂ ಮಾಜಿ ಅಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಮಂಚನಬಲೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರು ಇಂದು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತ ಹೆಸರನ್ನು ಗಳಿಸುತ್ತಿದ್ದಾರೆ. ಇದರಲ್ಲಿ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಒಬ್ಬರಾಗಿದ್ದು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿ ಕೀರ್ತಿಯನ್ನು ತಂದಿದ್ದಾರೆ ಎಂದರು. ಸಿ.ಎಸ್.ಎನ್. ರಮೇಶ್ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿ ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ದಾನಿ ಸಿ.ಎಸ್.ಎನ್. ರಮೇಶ್, ಕ್ಷೇತ್ರ ಶಿಕ್ಷಾಣಾಧಿಕಾರಿ ಶ್ರೀಕಂಠರವರನ್ನು ಸನ್ಮಾನಿಸಲಾಯಿತು. ಅಶ್ವತ್ಥ ಮತ್ತು ತಂಡದಿಂದ ನಡೆದ ಕನ್ನಡ ಗೀತೆಗಳ ಕಾರ್ಯಕ್ರಮ ಗಮನ ಸೆಳೆಯಿತು. ಮುಖ್ಯ ಶಿಕ್ಷಕಿ ರಾಧ, ಶಿಕ್ಷಕರಾದ ಗೋವಿಂದರಾಜು, ಶ್ರೀನಿವಾಸ್, ವಿಜಯ್ಕುಮಾರ್ ಇದ್ದರು.
ಇಂದಿರಾ ಗಾಂಧಿ ಜನ್ಮ ದಿನಾಚರಣೆ
ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿರವರ 94ನೇ ಜನ್ಮದಿನಾಚರಣೆಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ವಿ. ಸೋಮಶೇಖರ್, ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ ಇಂದಿರಾ ಗಾಂಧಿಯವರು ವಿಶ್ವದ ಶ್ರೇಷ್ಠ ನಾಯಕಿಯೆಂದು ಬಣ್ಣಿಸಿದರು. ದೀನ ದಲಿತರ ಕಲ್ಯಾಣಕ್ಕಾಗಿ ಒತ್ತು ಕೊಟ್ಟು ಗರೀಬಿ ಹಟಾವೊ ಘೋಷಣೆ ಮೂಲಕ ಬಡತನದ ನಿರ್ಮೂಲನೆಗಾಗಿ ಶ್ರಮಿಸಿದರು. ಸಾಮಾನ್ಯ ಜನರ ಆರ್ಥಿಕ ಅಭಿವೃದ್ಧಿಗಾಗಿ ಬ್ಯಾಂಕುಗಳ ರಾಷ್ಟ್ರೀಕರಣದಂತಹ ಕ್ರಾಂತಿಕಾರಿ ನಿಲುವನ್ನು ತಳೆದರು ಎಂದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೀಣಾ ರಾಮು, ಕೆಪಿಸಿಸಿ ಸದಸ್ಯ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ನಗರಸಭಾ ಸದಸ್ಯ ರಮೇಶ್, ಕಣಿತಹಳ್ಳಿ ವೆಂಕಟೇಶ್, ಟಿ. ವರದರಾಜು, ದಿಬ್ಬೂರು ಶ್ರೀನಿವಾಸ್, ಉಷಾ, ವೆಂಕಟಲಕ್ಷ್ಮಿ ಇದ್ದರು.
ಮಾಲೂರಿನಲ್ಲಿ ಕೆಜೆಪಿ ಪ್ರತಿಭಟನೆ
ಮಾಲೂರು: ಶಾದಿ ಭಾಗ್ಯ ಎಲ್ಲ ವರ್ಗದ ಬಡ ಹೆಣ್ಣು ಮಕ್ಕಳಿಗೂ ವಿಸ್ತರಿಸಬೇಕು ಹಾಗೂ ಎಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಣೆ ಮಾಡಬೇಕೆಂದು ಒತ್ತಾಯಿಸಿ ಕೆಜೆಪಿ ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿತು. ಈ ಸಂಧರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಸತೀಶ್ ಆರಾಧ್ಯ, ಸರ್ಕಾರ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕಾಗಿದ್ದು, ಮತಕ್ಕಾಗಿ ಒಂದು ಸಮುದಾಯದ ಒಲೈಸುವುದು ಸರಿಯಲ್ಲ ಎಂದರು. ಕೊಡಲೇ ಎಪಿಎಲ್ ಕಾರ್ಡ್ದಾರರಿಗೆ ನಿಲ್ಲಿಸಿರುವ ಪಡಿತರ ಬಿಡುಗಡೆ ಮಾಡಬೇಕೆಂದು ಅಗ್ರಹಿಸಿದರು. ಕೆಜಿಪಿ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಜಗದೀಶ್ಚಾರಿ, ರಾಜೇಶ್ವರಿ, ಬಿ.ಎನ್. ಶಿವುಕುಮಾರ್, ನಾರಾಯಣಮ್ಮ, ಚಂದ್ರಶೇಖರ್, ಮಂಜುನಾಥ್, ಭಾಗ್ಯಮ್ಮ, ಕಮಲಮ್ಮ, ಮಧು, ರಾಘವೇಂದ್ರ, ಸರೋಜಮ್ಮ, ರಾಮಕ್ಕ ಇದ್ದರು.
ಚಲಿಸುತ್ತಿದ್ದ ಬಸ್ನಿಂದ ಬಿದ್ದು ವಿದ್ಯಾರ್ಥಿ ಸಾವು
ಶ್ರೀನಿವಾಸಪುರ: ಬಸ್ಸಿನಿಂದ ಕೆಳಗೆ ಬಿದ್ದ ವಿದ್ಯಾರ್ಥಿಯೊಬ್ಬ ಬಸ್ ಚಕ್ರಕ್ಕೆ ಸಿಕ್ಕಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ರೋಣೂರು ಹೋಬಳಿಯ ಚೊಕ್ಕರೆಡ್ಡಿಹಳ್ಳಿ ಸತೀಶ್ ಕುಮಾರ್ ಮೃತ ವಿದ್ಯಾರ್ಥಿಯಾಗಿದ್ದು, ಇವರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು ಊರಿಗೆ ಹೋಗಲು ಬಸ್ ಹತ್ತಿದ್ದು, ಬಸ್ಸಿನಲ್ಲಿ ಜನ ತುಂಬಿದ್ದು, ಬಾಗಿಲಿನಲ್ಲಿ ನಿಂತುಕೊಂಡಿದ್ದಾಗ ಆಯಾ ತಪ್ಪಿ ಚಲಿಸುತ್ತಿದ್ದ ಬಸ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಲಾಗಿದೆ. ಈ ಬಗ್ಗೆ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವಿದ್ಯಾರ್ಥಿ ನಿಲಯ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಶಿಡ್ಲಘಟ್ಟ: ತಾಲೂಕಿನ ಚೀಮಂಗಲ ಗ್ರಾಮದ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸಾರ್ವಜನಿಕ ಬಾಲಕರ ವಿರ್ದ್ಯಾರ್ಥಿ ನಿಲಯದಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದು, ಕಳೆದ ಮೂರು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಊಟ ಹಾಕುತ್ತಿಲ್ಲ. 30 ಮಂದಿ ವಿದ್ಯಾರ್ಥಿಗಳ ಪೈಕಿ ಕೇವಲ 3 ಮಂದಿ ಮಾತ್ರ ನಿಲಯಕ್ಕೆ ಬಂದು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ಸಾಗುತ್ತಿದ್ದಾರೆ. ಇಲ್ಲಿನ ಸಿಬ್ಬಂದಿಯಾಗಲಿ ಮೇಲ್ವಿಚಾರಕರಾಗಲಿ ನಿಲಯದಲ್ಲಿರುವುದಿಲ್ಲ, ಅಡುಗೆ ಮಾಡುವುದಿಲ್ಲ, ಸಂಜೆಯಾದರೆ ನಿಲಯಕ್ಕೆ ಬೀಗ ಹಾಕಿಕೊಂಡು ಹೋಗುತ್ತಾರೆ ಎಂದು ಆರೋಪಿಸಿದರು.
ರೇಷನ್ ಕಾರ್ಡ್ ವಿಳಂಬ: ಸಾರ್ವಜನಿಕರ ಪ್ರತಿಭಟನೆ
ಗುಡಿಬಂಡೆ: ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನತೆಗೆ ಪಡಿತರ ಚೀಟಿ ನೀಡುವಲ್ಲಿ ಅಧಿಕಾರಿಗಳು ವಿಳಂಬ ತೋರುತ್ತಿದ್ದಾರೆಂದು ಆರೋಪಿಸಿ ಸಾರ್ವಜನಿಕರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಹೊಸ ಕಾರ್ಡುಗಳ ವಿತರಣೆ, ಹಳೇ ಕಾರ್ಡುಗಳ ನವೀಕರಣ ವಿಳಂಬವಾಗುತ್ತಿವೆ. ಹಿಂದೆ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದ ಬಹಳಷ್ಟು ಮಂದಿಯ ಪಡಿತರ ಚೀಟಿಗಳು ಎಪಿಎಲ್ಗೆ ಪರಿವರ್ತನೆಯಾಗಿವೆ. ಹೀಗಾಗಿ ಜನತೆಗೆ ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿ ಹೇಳಿದ್ದು: ತಾಲೂಕಿನಲ್ಲಿ 13 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳಿವೆ. ಈ ಪೈಕಿ ಸುಮಾರು 5 ಸಾವಿರ ಪಡಿತರ ಚೀಟಿಗಳು ತಾಂತ್ರಿಕ ತೊಂದರೆಯಿಂದಾಗಿ ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆಯಾಗಿದೆ. ಈ ಸಂಬಂಧ ಉಂಟಾಗಿರುವ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸದ್ಯದಲ್ಲೇ ಬಗೆಹರಿಸಲಾಗುವುದೆಂದು ಅಧಿಕಾರಿ ದೇವರಾಜ್ ತಿಳಿಸಿದ್ದಾರೆ.