ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಳೆಯಾಧಾರಿತ ಬೆಳೆ ಬೆಳೆಯಲು ಮುಂದಾಗಿ

Srinivasa Murthy VN
Updated On : 20 Nov 2013, 12:13 pm

ಶಿಡ್ಲಘಟ್ಟ: ಕೇವಲ ಕೊಳವೆ ಬಾವಿಯ ನೀರನ್ನೇ ರೈತರು ಆಶ್ರಯಿಸದೆ ಮಳೆಯಾಧಾರಿತ ಬೆಳೆಗಳನ್ನು ಬೆಳೆಸಬೇಕೆಂದು ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಎಚ್.ಆರ್. ಪ್ರಭಾಕರ್ ಹೇಳಿದರು.
ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಖುಷ್ಕಿ ಜಮೀನಿನಲ್ಲಿ ಬೆಳೆಯುತ್ತಿರುವ ಕೃಷಿಪಂಡಿತ ಪುರಸ್ಕೃತ ರೈತ ಎಚ್.ಜಿ. ಗೋಪಾಲಗೌಡರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ವರ್ಷಕ್ಕೆ ಮಳೆಯಾಧಾರಿಸಿ ಮೂರ್ನಾಲ್ಕು ಬಾರಿ ರೇಷ್ಮೆ ಬೆಳೆ ಬೆಳೆಯಬಹುದು ಎಂದು ಸಾಬೀತು ಪಡಿಸಿರುವ ರೈತ ಗೋಪಾಲಗೌಡರ ಹಾದಿಯಲ್ಲಿಯೇ ಈ ಪ್ರದೇಶದ ಎಲ್ಲಾ ರೈತರು ಸಾಗಬೇಕು. ಖುಷ್ಕಿ ಜಮೀನಿನಲ್ಲಿ ಬೆಳೆ ಬೆಳೆಯಲು ಮುಂದಾಗಬೇಕು. ಇದಕ್ಕೆ ಇಲಾಖೆಯ ವತಿಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಸುಮಾರು ಹದಿನೈದು ರೀತಿಯ ಮಿಶ್ರ ಬೆಳೆಗಳನ್ನು ಒಂದೇ ಭೂಮಿಯಲ್ಲಿ ಬೆಳೆಯುತ್ತಿರುವ ಬಗ್ಗೆ ರೈತ ಗೋಪಾಲಗೌಡ ಮಾತನಾಡಿ, ಖುಷ್ಕಿ ಭೂಮಿಯ ಸುಮಾರು 11 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಸೊಪ್ಪು ಸೇರಿದಂತೆ ಮಾವು, ರಾಗಿ, ಕಡಲೆ, ಅವರೆ, ಟಮೋಟೋ ಇತ್ಯಾದಿ ಹದಿನೈದು ರೀತಿಯ ಬೆಳೆಗಳನ್ನು 2 ಗ್ಯಾಲನ್ ನೀರಿನಲ್ಲಿ ಬೆಳೆಯುತ್ತಿದ್ದು ನೀರಾವರಿ ಜಮೀನಿನಲ್ಲಿ ಬೆಳೆದ ಬೆಳೆಗಿಂತ ಖುಷ್ಕಿ ಭೂಮಿಯಲ್ಲಿ ಬೆಳೆದ ಬೆಳೆ ಉತ್ತಮವಾಗಿದೆ. ಹೀಗೆ ಖುಷ್ಕಿ ಭೂಮಿಯಲ್ಲಿ ಬೆಳೆ ಬೆಳೆಯಲು ದೂರದ ಕೆರೆಯಿಂದ ಮಣ್ಣನ್ನು ಹೊಡೆಸಿ ಫಲವತ್ತು ಮಾಡಿರುವುದು ಕಾರಣವಾಗಿದೆ ಎಂದರು.
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ತಡಾಳ್ ಹಾಗೂ ರೈತ ಮಹಿಳಾ ಕೂಟದ ಸದಸ್ಯರು ಹಾಜರಿದ್ದರು.

ನೀರಿನ ಟ್ಯಾಂಕರ್ ಹರಿದು ವ್ಯಕ್ತಿ ಬಲಿ
ಬಂಗಾರಪೇಟೆ: ನೀರಿನ ಟ್ಯಾಂಕರ್ ಹರಿದು ವ್ಯಕ್ತಿಯೊಬ್ಬ ಮೃತಪಟ್ಟು ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಪ್ರಕರಣ ಪಟ್ಟಣದ ಪುರಸಭೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೆಜಿಎಫ್ ಬಳಿಯಿರುವ ಗೊಲ್ಲಹಳ್ಳ ಗ್ರಾಮದ ಶಿವಪ್ಪ 30 ಎಂದು ಗುರುತಿಸಲಾಗಿದೆ. ಪ್ರಮೀನ್ ಮತ್ತು ಬಾಲಾಜಿ ಕೆಜಿಎಫ್ ನಿವಾಸಿಗಳು ಗಾಯಾಳಗಳಾಗಿದ್ದು ಇವರು ಬೆಂಗಳೂರಿಗೆ ಪ್ರತಿದಿನ ಕೂಲಿ ಕೆಲಸಕ್ಕೆ ಹೋಗಿ ಬರುವರು ಮಂಗಳವಾರ ಸಹ ಕೆಲಸ ಮುಗಿಸಿಕೊಂಡು ಬಸ್ ನಿಲ್ದಾಣದಲ್ಲಿ ಕೆಜಿಎಫ್ ಬಸ್‌ಗಾಗಿ ಕಾಯುತ್ತಿದ್ದರು. ಆಗ ಯಮನ ರೂಪದಲ್ಲಿ ಬಂದ ನೀರಿನ ಟ್ಯಾಂಕರ್ ಶಿವಪ್ಪನನ್ನು ಬಲಿ ತೆಗೆದುಕೊಂಡಿದೆ. ಅದೃಷ್ಟಾವತ್ ಇಬ್ಬರು ಬಚಾವ್ ಆಗಿದ್ದಾರೆ. ದೇಶಿಹಳ್ಳಿ ಬಡಾವಣೆಯ ಪ್ರಭಾಕರ್ ರಾವ್ ಎಂಬುವರ ನೀರಿನ ಟ್ಯಾಂಕರ್ ಅರ್ಧ ಭಾಗದ ನೀರನ್ನು ಮನೆಯೊಂದಕ್ಕೆ ಪೂರೈಸಿ ಉಳಿದ ಅರ್ಧ ನೀರನ್ನು ಹೊತ್ತ ಟ್ಯಾಂಕರ್ ಬೂದಿಕೋಟೆ ವೃತ್ತದಿಂದ ದೇಶಿಹಳ್ಳಿ ಕಡೆ ಹೋಗಲು ಬಸ್‌ನಿಲ್ದಾಣದ ಪೊಲೀಸ್ ಚೌಕ್ ತಿರುವಿನಲ್ಲಿ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ನಿಂದ ಟ್ಯಾಂಕರ್ ಕೊಂಡಿ ಕಳಚಿ ಬಿದ್ದಿದೆ. ಆಗ ರಸ್ತೆ ಬದಿಯಲ್ಲೇ ನಿಂತಿದ್ದ ಶಿವಪ್ಪನ ಮೇಲೆ ಟ್ಯಾಂಕರ್ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪಿಎಸ್‌ಐ ಯೋಗಾನಂದ್ ಪ್ರಕರಣ ದಾಖಲಿಕೊಂಡು ಚಾಲಕನ ಪತ್ತೆಗೆ ತಲಾಶ್ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement