ಕನಕದಾಸರ ಅದ್ಧೂರಿ ಜಯಂತ್ಯುತ್ಸವ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ನ. 20
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಬುಧವಾರ ಅದ್ಧೂರಿಯಾಗಿ ಆಚರಿಸಲಾಯಿತು.
ತಮ್ಮ ದಾಸಸಾಹಿತ್ಯದಿಂದ ಇಡೀ ಜಗತ್ತಿಗೆ ಸಂದೇಶ ನೀಡಿದ ಕನಕರನ್ನು ಸ್ಮರಿಸಿ ಗುಣಗಾನ ಮಾಡಲಾಯಿತು. ನಗರದ ಶ್ರೀ ಮರಳು ಸಿದ್ದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಗೆ ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ರೀತಿಯ ಕಲಾ ತಂಡಗಳು ಮೆರಗು ತಂದರೆ, ಜಿಲ್ಲಾ ರಕ್ಷಣಾಧಿಕಾರಿ ಎನ್. ಶಿವಪ್ರಸಾದ್, ಸಮುದಾಯದ ಮುಖಂಡರು, ಕನಕದಾಸ ವೇಷಾಧಾರಿಗಳು ಸೇರಿದಂತೆ ಹಲವರು ಸಾಥ್ ನೀಡಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ವಿವಿಧ ಗ್ರಾಮಗಳಿಂದ ಮುತ್ತಿನ ಪಲ್ಲಕ್ಕಿಯಲ್ಲಿ ಕನಕದಾಸರ ಭಾವಚಿತ್ರವನ್ನಿಟ್ಟು ಆಗಮಿಸಿದ್ದ ವಾಹನಗಳ ಮುಂದೆ ಮಹಿಳೆಯರು ತಲೆಯ ಮೇಲೆ ಕಲಶಗಳನ್ನು ಹೊತ್ತು ಸಾಗಿದರು. ಯುವಕರು ತಲೆಯ ಮೇಲೆ ತೆಂಗಿನ ಕಾಯಿ ಹೊಡೆದುಕೊಳ್ಳುವ ಮೂಲಕ ಸಾಹಸ ಪ್ರದರ್ಶಿಸಿದರು. ಇದಕ್ಕೂ ಮುನ್ನಾ ನಗರದ ಎಲೇಪೇಟೆಯ ಕನಕ ಮಂದಿರದಲ್ಲಿ ಪೂಜಾ, ಭಜನಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.
ಮೊದಲ ಸಂತರು: ಸ್ವತಃ ಭಗವಂತನನ್ನು ಕಂಡ ಕನಕದಾಸರು ಮೊದಲ ಸಂತರು ಎಂದು ಜಿಲ್ಲಾ ರಕ್ಷಣಾಧಿಕಾರಿ ಎನ್. ಶಿವಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ವ ಕಾಲಕ್ಕೂ ಕನಕದಾಸರು ದಾರಿ ದೀಪವಾಗಿದ್ದಾರೆ. ವಿಶ್ವಕ್ಕೆ ಸಂದೇಶದ ಮೂಲಕ ಮಾರ್ಗದರ್ಶನ ನೀಡಿದಂತಹ ಮಹಾನ್ ವ್ಯಕ್ತಿಯ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷ ಚಿನ್ನಪ್ಪ, ಕನಕದಾಸರ ಸ್ಮರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಎಂದರು.
ಹೆಚ್ಚಿನ ಬದ್ಧತೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಹಿಂದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಲು ಹೆಚ್ಚಿನ ಬದ್ಧತೆ ಹೊಂದಿದೆ ಎಂದು ಶಾಸಕ ಕೆ. ಸುಧಾಕರ್ ತಿಳಿಸಿದರು. ಅಹಿಂದ ವರ್ಗಗಳ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರು.ಗಳನ್ನು ಮೀಸಲಿಟ್ಟಿದ್ದು ಶೇ.4 ರ ಬಡ್ಡಿ ದರಲ್ಲಿ ಕುರಿಗಳನ್ನು ಸಾಕಾಣೆ ಮಾಡಲು, ಕಂಬಳಿ ನೇಕಾರರಿಗಾಗಿ ತಲಾ 1 ಲಕ್ಷ ರು.ಗಳ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರ ಹಾಲಪ್ಪ, ಎಸ್.ವೈ. ಮರಿಯಪ್ಪ, ಕನಕರ ವಿಚಾರಧಾರೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವರನ್ನು ಸನ್ಮಾನಿಸಲಾಯಿತು. ಗ.ನಾ. ಅಶ್ವತ್ಥ ಮತ್ತು ತಂಡ ಕನಕ ಸಂಕೀರ್ತನೆಗಳ ಗಾಯನದ ಮೂಲಕ ಗಮನ ಸೆಳೆಯಿತು. ಜಿಲ್ಲಾಧಿಕಾರಿ ಆರ್. ವಿಶಾಲ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಸತ್ಯಭಾಮಾ, ಕುರುಬರ ಸಂಘದ ಜಿಲ್ಲಾಧ್ಯಕ್ಷ ರಾಮಚಂದ್ರ, ಮುನಿಯಪ್ಪ, ರಾಮಕೃಷ್ಣಪ್ಪ, ರಂಗಪ್ಪ, ದೇವಿಕುಮಾರಿ, ಸುಮಿತ್ರಮ್ಮ ಇದ್ದರು.