ಕನಕದಾಸರ ಆದರ್ಶಗಳನ್ನು ಪಾಲಿಸಿ: ಶಾಸಕ ಎಂ. ರಾಜಣ್ಣ
ಶಿಡ್ಲಘಟ್ಟ: ಪ್ರತಿಯೊಬ್ಬರು ಕನಕದಾಸರ ಆದರ್ಶ ತತ್ವಗಳನ್ನು ಅರ್ಥೈಸಿಕೊಂಡು ಜಾತಿಭೇದ ಮರೆತು ಬಾಳಬೇಕೆಂದು ಶಾಸಕ ಎಂ. ರಾಜಣ್ಣ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಕನಕದಾಸರ ಸಂದೇಶದಂತೆ ನಡೆದುಕೊಂಡಾಗ ಉತ್ತಮ ಸಮಾಜ ನಿರ್ಮಾಣ ಮಾಡಬಹುದೆಂದು ತಿಳಿಸಿದರು. ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯದರ್ಶಿ ಸಿ.ಎನ್. ಚಂದ್ರಕಲಾ ಮಾತನಾಡಿ, 98 ವರ್ಷಗಳ ತಮ್ಮ ಬದುಕಿನಲ್ಲಿ ಕನಕದಾಸರು ಜಾತಿ ವೈಮನಸ್ಯ, ಅಸೂಯೆ ಮನೋಭಾವನೆ ನಿರ್ಮೂಲನೆ ಮಾಡಲು ಶ್ರಮಿಸಿದರು ಎಂದರು.
ತಹಸೀಲ್ದಾರ್ ನಾರಾಯಣಸ್ವಾಮಿ ಮಾತನಾಡಿ, ಕನಕದಾಸರು ಒಂದು ಧ್ರುವತಾರೆ. ಅವರು ಕೊಟ್ಟ ಕೊಡುಗೆ ಅಪಾರ. ಜಾತಿ ಭೇದವನ್ನು ತೊಡೆದು ಹಾಕಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದವರಲ್ಲಿ ಕನಕದಾಸರು ಒಬ್ಬರು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ತಾಪಂ ಅಧ್ಯಕ್ಷ ಯರಬಚ್ಚಪ್ಪ, ಕಾರ್ಯ ನಿರ್ವಹಣಾಧಿಕಾರಿ ದೇವರಾಜೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ. ಗಣೇಶಪ್ಪ, ಎ. ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರಘುನಾಥರೆಡ್ಡಿ, ವೃತ್ತ ನಿರೀಕ್ಷಕ ಬಿ.ಎಲ್. ಶ್ರೀನಿವಾಸ ಮೂರ್ತಿ,ಪುರಸಭೆಯ ಮುಖ್ಯಾಧಿಕಾರಿ ಡಿ. ಚೆನ್ನರಾಯಪ್ಪ ಇದ್ದರು.
'ಸಮಾನತೆ ಮೂಡಿಸಿದ ಮಹಾನ್ ಸಂತ ಕನಕ'
ಗೌರಿಬಿದನೂರು: ಕುಲ-ಕುಲಗಳ ನಡುವೆ ಸಮಾನತೆ ಮೂಡಿಸಿದ ಮಹಾನ್ ಸಂತ ಕನಕದಾಸರ ತತ್ವಗಳು ಇಂದಿಗೂ ಮಾದರಿಯಾಗಿರುವುದು ಸಂತಸದ ವಿಷಯ ಎಂದು ವಿಧಾನ ಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ ಜನ್ಮ ದಿನೋತ್ಸವದಲ್ಲಿ ಮಾತನಾಡಿ, ತಮ್ಮದೇ ಆದ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೆ ಮಾರ್ಗದರ್ಶಕರಾದ ವ್ಯಕ್ತಿ ಎಂದರು.
ಉಪನ್ಯಾಸಕ ಡಿ. ನಾಗರಾಜು ಮಾತನಾಡಿ, ದಾಸರು ಸಮಾಜದ ಒಂದು ವರ್ಗಕ್ಕೆ ಕಟ್ಟುಬಿದ್ದವರಲ್ಲ. ಎಲ್ಲಾ ಮತಗಳ ದಾರ್ಶನಿಕ ನಾಯಕರ ಉತ್ತಮ ಸಿದ್ಧಾಂತಗಳನ್ನು ಸ್ವೀಕರಿಸಿ ವಿಶಾಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು ಎಂದರು.
ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ, ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ತಾವಿಕ ಭಾಷಣ ಮಾಡಿದ ತಾಲೂಕು ದಂಡಾಧಿಕಾರಿ ಎನ್. ಭಾಸ್ಕರ್, ಜಿಪಂ ಸದಸ್ಯ ಕೇಶವರೆಡ್ಡಿ, ತಾಪಂ ಅಧ್ಯಕ್ಷ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷ ಪಾರ್ವತಮ್ಮ, ತಾಪಂ ಸದಸ್ಯ ಕೀಮ್ಲಾನಾಯಕ್, ಕೃಷಿ ಇಲಾಖೆಯ ಅನುರೂಪ, ವೃತ್ತ ನಿರೀಕ್ಷಕ ಕೆ. ನಾಗರಾಜು, ಇಒ ರೆಡ್ಡಪ್ಪ, ಲಂಕಪ್ಪ, ಮೈಲಾರಪ್ಪ, ರಾಮಕೃಷ್ಣ ಇದ್ದರು.