ಕನಕದಾಸರ ಮಾರ್ಗದರ್ಶನದಲ್ಲಿ ನಡೆಯಿರಿ: ನಾರಾಯಣಸ್ವಾಮಿ
ಬಂಗಾರಪೇಟೆ: ಕನಕದಾಸರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರು ನಡೆದರೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ಬಯಲುರಂಗಮಂದಿರದಲ್ಲಿ ತಾಲೂಕು ಆಡಳಿತ ಹಾಗೂ ಕುರುಬ ಸಂಘದಿಂದ ಹಮ್ಮಿಕೊಂಡಿದ್ದ ಕನಕ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ಕನ್ನಡದ ಶ್ರೇಷ್ಟ ಸಂತ, ಕವಿ ತಮ್ಮ ಕೀರ್ತನೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಕನಕದಾಸರು ಒಬ್ಬರು ಎಂದರು.
ಕೋಲಾರ ಶಾಸಕ ವರ್ತೂರು ಪ್ರಕಾಶ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡದೆ ಸ್ಥಳೀಯ ಶಾಸಕ ನಾರಾಯಣಸ್ವಾಮಿ ಸಮಾಜದ ಬಂಧುಗಳಿಗೆ ಉತ್ತಮ ಕೆಲಸ ಮಾಡುವ ಮೂಲಕ ಅವರ ಬೆಂಬಲ ಪಡೆಯಬೇಕೆಂದು ಹೇಳಿ ವೇದಿಕೆಯಿಂದ ನಿರ್ಗಮಿಸಿದ್ದು ಆಶ್ಚರ್ಯ ಮೂಡಿಸಿತು. ಮುಖ್ಯ ಭಾಷಣಕಾರರಾಗಿ ನಾರಾಯಣಪ್ಪ ಮಾತನಾಡಿದರು. ತಹಸೀಲ್ದಾರ್ ಉಷಾ, ತಾಪಂ ಅಧ್ಯಕ್ಷೆ ರೇಣುಕಾ, ಪಲ್ಲವಿಮಣಿ, ಚಂದ್ರಶೇಖಗೌಡ, ಎಲ್. ರಾಮಕೃಷ್ಣಪ್ಪ,ಅಶ್ವಥ್, ಮಹೇಶ್, ವೃತ್ತನಿರೀಕ್ಷಕ ವೆಂಕಟಾಚಲಪತಿ ಇದ್ದರು. ನಂತರ ನಡೆದ ಶಬ್ದ ಚಿತ್ರಗಳ ಮೆರವಣಿಗೆಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಟ್ರ್ಯಾಕ್ಟರ್ ಚಾಲಿಸಿ ಚಾಲನೆ ನೀಡಿದರು.
ಯುವಕ ನೀರುಪಾಲು
ಮೈಸೂರು: ಬಹಿರ್ದೆಸೆಗೆ ತೆರಳಿದ್ದ ಯುವಕನೊಬ್ಬ ನೀರು ಪಾಲಾಗಿದ್ದು, ಆತನ ಮೃತದೇಹವು ಮೈಸೂರು ತಾಲೂಕು ಟಿ.ಕಾಟೂರು ಬಳಿ ವರುಣ ನಾಲೆಯಲ್ಲಿ ಬುಧವಾರ ಪತ್ತೆಯಾಗಿದೆ. ಮೈಸೂರು ತಾಲೂಕು ಚಿಕ್ಕಹಳ್ಳಿ ನಿವಾಸಿ ಮಾದಶೆಟ್ಟಿ ಎಂಬವರ ಪುತ್ರ ಶಿವರಾಮು(25) ಮೃತಪಟ್ಟವರು.