ಕಬಡ್ಡಿ: ಕೆಜಿಎಫ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ
ಕೆಜಿಎಫ್: ಶಿಕ್ಷಣ ಇಲಾಖೆಯಿಂದ ಕಳೆದ ಒಂದು ವಾರದಿಂದ ಕೋಲಾರದಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಒಟ್ಟು 5 ತಾಲೂಕುಗಳ ಪೈಕಿ ಪ್ರಥಮ ಸ್ಥಾನ ಪಡೆದ ಕೆಜಿಎಫ್ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇದೇ ತಿಂಗಳು 22 ರಿಂದ 23 ವರೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಕೆಜಿಎಫ್ ಕ್ಷೇತ್ರದ ಗಡಿ ಪ್ರದೇಶಗಳಿಂದ ಬರುವ ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ವಿದ್ಯಾಭ್ಯಾಸದ ಜೊತೆಗೆ ವಿವಿಧ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುವದು ವಿದ್ಯಾರ್ಥಿಗಳ ತಂದೆ ತಾಯಿ ಸೇರಿದಂತೆ ಸರ್ಕಾರಿ ಶಾಲಾ ಕಾಲೇಜುಗಳಿಗೆ ಕೀರ್ತಿ ತಂದುಕೊಟ್ಟಂತಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಸುಬ್ರಮಣ್ಯಆಚಾರಿ ತಿಳಿಸಿದರು. ಕಾಲೇಜಿನ ಉಪನ್ಯಾಸಕರಾದ ಎಂ.ಎನ್. ರಾಮಚಂದ್ರ, ವಿ. ಧನಲಕ್ಷ್ಮಿ, ಬಿ. ನಿರ್ಮಲಾ, ವಿ. ಚಂದ್ರಪ್ಪ, ಮೇಲ್ವಿಚಾರಕ ಮುನಿರಾಜು, ತರಬೇತಿದಾರ ಶಿವಕುಮಾರ್ ಶುಭಹಾರೈಸಿದರು.
ರಾಜ್ಯ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ
ಕೋಲಾರ: 2013-14 ನೇ ಸಾಲಿನ ರಾಜ್ಯ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ ಗುಂಪು-1 ನ್ನು ಶಿವಮೊಗ್ಗ ಜಿಲ್ಲೆಯ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗುತ್ತಿದ್ದು ಇದರಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡೆಗಳನ್ನು ನ.22 ರಿಂದ 23ರವರೆಗೆ ನಡೆಸಲಾಗುವುದು. ಇದರಲ್ಲಿ ಕೋಲಾರ ಜಿಲ್ಲಾ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಥ್ಲೆಟಿಕ್ಸ್ನಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದವರು, ಪ್ರಥಮ ಸ್ಥಾನ ಪಡೆದವರು ನ.22ರಂದು ಶಿವಮೊಗ್ಗ ಜಿಲ್ಲೆಯ ನೆಹರು ಕ್ರೀಡಾಂಗಣದಲ್ಲಿ ವ್ಯವಸ್ಥಾಪಕರ ಬಳಿ ವರದಿ ಮಾಡಿಕೊಂಡು ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ಹಾಗೂ ದಿನ ಭತ್ಯೆ ನೀಡಲಾಗುವುದು. ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೋಲಾರ ಸಂಖ್ಯೆ 08152-222320 ಸಂಪರ್ಕಿಸಿ.
ಮೌಢ್ಯ ಕಡಿವಾಣಕ್ಕೆ ವಿರೋಧ
ಟೇಕಲ್: ಸಾವಿರಾರು ವರ್ಷಗಳಿಂದ ಎಲ್ಲಾ ಧರ್ಮಗಳಲ್ಲಿ ತನ್ನದೇ ಆದ ನಂಬಿಕೆಗಳು ಸಾಂಪ್ರಧಾಯಗಳು ಇದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂತಹ ನಂಬಿಕೆಗಳಿಗೆ ಕಾನೂನು ತಂದು ರದ್ದು ಮಾಡಲು ಹೊರಟಿರುವುದನ್ನು ಖಂಡಿಸುವುದಾಗಿ ಕೋಲಾರ ಜಿಲ್ಲಾ ರೇಣುಕಾ ಯಲ್ಲಮ್ಮ ಬಳಗದ ಅಧ್ಯಕ್ಷ ಬಂಡೂರು ಅಗ್ರಹಾರದ ಡಾ.ಪಿ. ನಾರಾಯಣಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾನೊಬ್ಬ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು ಸಿದ್ದರಾಮಯ್ಯನವರ ಬಗ್ಗೆ ಅಪಾರ ಗೌರವವಿದೆ. ಆದರೆ ಯಾವುದೇ ಸಲಹೆ ಪಡೆಯದೆ ಮೂಢನಂಬಿಕೆಗಳಿಗೆ ಕಡಿವಾಣ ಕರಡು ಮಸೂದೆ ತಯಾರು ಮಾಡಿರುವುದು ಶೋಚನೀಯ ಎಂದರು.
ಪಾದ ಪೂಜೆಗೆ ಕಡಿವಾಣ: ಗತಕಾಲದಿಂದಲೂ ಗುರು, ತಂದೆ-ತಾಯಿಗಳಿಗೆ ಪಾದ ಪೂಜೆ ಮಾಡುವುದು ಸ್ವಇಚ್ಚೆಯಾಗಿತ್ತು, ಅದನ್ನು ತಡೆಯುವುದು ಎಷ್ಟರಮಟ್ಟಿಗೆ ಸರಿ, ವಾಸ್ತು, ಜ್ಯೋತಿಷ್ಯ ನಿಷೇಧಿಸಿದರೆ ರಾಜ್ಯದಲ್ಲಿ ಸಂಪ್ರಧಾಯವಾದಿ ಸಮುದಾಯಗಳು ದಂಗೆ ಏಳುವುದರಲ್ಲಿ ಸಂದೇಹವಿಲ್ಲ. ಇವೆಲ್ಲವುಗಳ ಮಧ್ಯೆ ಮದುವೆ, ವಾಸ್ತು ಪೂಜೆ, ಗೃಹಪ್ರವೇಶ, ಪಂಚಾಂಗ, ಕ್ಯಾಲೆಂಡರ್ ನಿಷೇಧ ಮಾಡಲಿ ಎಂದು ವ್ಯಂಗ್ಯವಾಗಿ ನುಡಿದರು.
ಲೋಕಸಭಾ ಚುನಾವಣೆಗೆ ಪೆಟ್ಟು: ಇಂತಹ ಜನವಿರೋಧಿ ಕಾನೂನುಗಳಿಂದ ಜನತೆಗೆ ಬೇಸರ ಉಂಟಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪೆಟ್ಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಜನವಿರೋಧಿ ಕರಡು ಮಸೂದೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ರೇಣುಕಾಂಬ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸೇವಾ ಸಂಘದ ವೆಂಕಟಲಕ್ಷ್ಮಮ್ಮ, ಶಿವಣ್ಣ, ಆನಂದ್ ಇದ್ದರು.