ಗ್ರಂಥಾಲಯಗಳು ಜ್ಞಾನ ದೇಗುಲಗಳು
ಕೋಲಾರ: ಗ್ರಂಥಾಲಯಗಳು ಜ್ಞಾನದೇಗುಲ ಎಂಬುದನ್ನು ಮಕ್ಕಳಲ್ಲಿ ಅರಿವು ಮೂಡಿಸಲು ಶಿಕ್ಷಕರು, ಪೋಷಕರು ಪ್ರಯತ್ನಿಸಬೇಕೆಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ಕರೆ ನೀಡಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳನ್ನು ಗ್ರಂಥಾಲಯಗಳತ್ತ ಸೆಳೆಯುವ ಕೆಲಸವಾಗಬೇಕು, ಇಲ್ಲಿ ಸಿಗುವ ಪುಸ್ತಕಗಳಿಂದ ಸಮಗ್ರ ಜ್ಞಾನಾಭಿವೃದ್ಧಿಗೆ ನೆರವಾಗುತ್ತದೆಂಬುದನ್ನು ತಿಳಿಸಿಕೊಡಬೇಕೆಂದರು.
ಶಾಲಾ ಮಕ್ಕಳು ಗ್ರಂಥಾಲಯಕ್ಕೆ ಪ್ರವಾಸ ಬರುವಂತೆ ಪ್ರೇರೇಪಿಸಬೇಕು, ಅಲ್ಲಿ ಆ ಒಂದು ದಿನ ಪೂರ್ತಿ ಅವರ ಜ್ಞಾನಾಭಿವೃದ್ಧಿಗೆ ಅಗತ್ಯವಾದ ಕೆಲಸ ಮಾಡಿ ಪುಸ್ತಕ ಗುರುತಿಸುವ ಸಂಸ್ಕೃತಿ ಅವರಲ್ಲಿ ಬೆಳೆಯುವಂತೆ ಮಾಡಬೇಕೆಂದರು.
ಗ್ರಂಥಾಲಯದಲ್ಲಿ ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸಾಧನೆ ಮಾಡಿದ ಉದ್ಯೋಗ ಗಿಟ್ಟಿಸಿದ ಅನೇಕ ಮಂದಿ ನಮ್ಮ ಮುಂದಿದ್ದಾರೆ ಎಂದ ಅವರು ಓದುವ ಹವ್ಯಾಸ ಬೆಳೆಸುವ ಹೊಣೆ ಇದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜ್, ಬದುಕಿನ ಪಾಠಗಳನ್ನು ಗ್ರಂಥಗಳಿಂದಲೇ ಕಲಿಯಬಹುದಾಗಿದೆ, ಅಂತಹ ಪುಸ್ತಕಗಳು ನಮ್ಮಲ್ಲಿವೆ ಎಂದರು.
ಶಿಕ್ಷಕರು ಸಹಾ ಮೊದಲು ಗ್ರಂಥಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು, ಈ ಗ್ರಂಥಗಳಲ್ಲಿರುವ ಸಾರವನ್ನು ಮಕ್ಕಳಿಗೆ ತಲುಪಿಸಿ ಅವರು ಗ್ರಂಥಾಲಯಗಳ ಕಡೆ ಕಾಲು ಬೆಳೆಸುವಂತೆ ಮಾಡಬೇಕೆಂದರು.
ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕ ರಂಗಯ್ಯ, ನಮ್ಮ ಭವಿಷ್ಯದ ಕುಡಿಗಳಿಗೆ ಭೌದ್ಧಿಕ ಶಕ್ತಿ ತುಂಬಲು ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ರೂಢಿಸಬೇಕೆಂದರು. ಜಿಲ್ಲಾ ಗ್ರಂಥಾಲಯಾಧಿಕಾರಿ ಸಿ.ಗಣೇಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಓದಿ ಸರ್ಕಾರಿ ಹುದ್ದೆ ಪಡೆದುಕೊಂಡ ನಾಗರಾಜ್ ಮತ್ತಿತರರು ಗ್ರಂಥಾಲಯಕ್ಕೆ ಮಹಾತ್ಮಾ ಗಾಂಧಿ ಹಾಗೂ ವಿವೇಕಾನಂದರ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡಿ, ತಮಗೆ ಇಲ್ಲಿ ದೊರೆತ ಸೌಲಭ್ಯಗಳ ಕುರಿತು ವಿವರಿಸಿದರು.
ಉತ್ತಮ ಗ್ರಂಥಾಲಯ ಮೇಲ್ವಿಚಾರಕರಾಗಿ ರಾಜ್ಯ ಪ್ರಶಸ್ತಿ ಗಳಿಸಿದ ಕೀಲುಕೋಟೆ ನಗರಸಭೆ ಶಾಖಾ ಗ್ರಂಥಾಲಯದ ಮೇಲ್ವಿಚಾರಕ ಪಿ.ಎಂ. ಸುಬ್ರಹ್ಮಣ್ಯಂ ಹಾಗೂ ನಗರ ಕೇಂದ್ರ ಗ್ರಂಥಾಲಯದ ನಾಗಮಣಿ ಅವರನ್ನು ಅಭಿನಂದಿಸಲಾಯಿತು.
ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ರೂಪ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಂಥಾಲಯ ಮೇಲ್ವಿಚಾರಕರಾದ ಕೋಲಾರದ ಸರಸ್ವತಿ, ಬಂಗಾರಪೇಟೆಯ ಸುಬ್ರಹ್ಮಣ್ಯಾಚಾರಿ, ಮಾಲೂರಿನ ನೊಸಗೆರೆ ನಾರಾಯಣಸ್ವಾಮಿ, ಹನುಮನಹಳ್ಳಿಯ ನಂಜುಂಡಪ್ಪ, ಯಲ್ದೂರಿನ ಮಂಜುನಾಥ್, ಸಿಬ್ಬಂದಿ ಆರ್.ಪಿ.ಭಜಂತ್ರಿ, ಎನ್. ಸರೋಜಮ್ಮ, ಖುರ್ಷಿದ್ ಉನ್ನೀಸಾರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಚಂದ್ರಪ್ಪ, ಕೃಷ್ಣಪ್ಪ ಇದ್ದರು. ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಪಿ.ಎಂ. ಸುಬ್ರಮಣ್ಯಂ ನಿರೂಪಿಸಿ, ಹೋಳೂರು ನಾರಾಯಣಸ್ವಾಮಿ ವಂದಿಸಿದರು.