'ಅಸಂಘಟಿತ ಕಾರ್ಮಿಕರು ಸೌಲಭ್ಯ ಬಳಸಿಕೊಳ್ಳಿ'
ಬಾಗೇಪಲ್ಲಿ; ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಬರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಇಲಾಖೆ ಅಧಿಕಾರಿಗಳು ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಸಭೆ ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಿಐಟಿಯು ತಾಲೂಕು ಸಮಿತಿ ಉಪಾಧ್ಯಕ್ಷ ಬಿ. ಆಂಜನೇಯರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್.ಬಿ.ಎಂ.ರಸ್ತೆಯ ಚಿತ್ರಾವತಿ ಟೆಂಪೋ ಮತ್ತು ಲಾರಿ ಮಾಲೀಕರ ಮತ್ತು ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯನಾಗಿದ್ದ ತಾಲೂಕಿನ ಕೊಂಡರೆಡ್ಡಿಪಲ್ಲಿಯ ಗಾರೆ ಕೆಲಸಗಾರ(ಕಟ್ಟಡ ಕಾರ್ಮಿಕ) ಗಂಗಪ್ಪ ಎಂಬವರು ಇತ್ತೀಚೆಗೆ ಸಹಜ ಮರಣ ಹೊಂದಿದ್ದು ಅವರ ಕುಟುಂಬದವರಿಗೆ ಪರಿಹಾರವಾಗಿ ಇಲಾಖೆಯಿಂದ 50 ಸಾವಿರ ರು.ಗಳ ಚೆಕ್ನ್ನು ಹೆಂಡತಿ ಅಶ್ವತ್ಥಮ್ಮನವರಿಗೆ ವಿತರಿಸಿ ಮಾತನಾಡಿ, ಸರ್ಕಾರದಿಂದ ಬರುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಪ್ರಚಾರವಿಲ್ಲದೆ ಬಹುತೇಕ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಮಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಅಸಂಘಟಿತ ಹಾಗೂ ಕಟ್ಟಡ ಕಾರ್ಮಿಕರಿಗೆ ಇಲಾಖೆಯಿಂದ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಸಭೆ ನಡೆಸಿ ಅರಿವು ಮಾಡಿಸಿದಾಗ ಅವರು ಇಲಾಖೆಯ ವತಿಯಿಂದ ಬರುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ಸಾಧ್ಯ ಎಂದರು.
ತಾಲೂಕಿನಲ್ಲಿ ಈಗಾಗಲೇ ಕಾರ್ಮಿಕ ಮಂಡಳಿಯಲ್ಲಿ ಸದಸ್ಯರಾಗಿ ಮರಣ ಹೊಂದಿರುವ ತಾಲೂಕಿನ 6 ಮಂದಿ ಕಾರ್ಮಿಕರ ಕುಟುಂಬಗಳಿಗೆ ಇಲಾಖೆಯಿಂದ ಸುಮಾರು 3ಲಕ್ಷ ರು.ಗಳ ಪರಿಹಾರ ನೀಡಲಾಗಿದೆ. ಚಿತ್ರಾವತಿ ಟೆಂಪೋ ಮತ್ತು ಲಾರಿ ಮಾಲೀಕರ ಮತ್ತು ಚಾಲಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮರಣ ಹೊಂದಿದ ಟೆಂಪೋ ಮತ್ತು ಲಾರಿ ಚಾಲಕರ 5 ಮಂದಿ ಕುಟುಂಬಗಳಿಗೆ ಸುಮಾರು ತಲಾ 25 ಸಾವಿರ ರು.ಗಳ ಪರಿಹಾರ ನೀಡಲಾಗಿದೆ. ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿರುವ 450 ಚಾಲಕರಿಗೆ ಜೀವ ವಿಮೆಯ 2ಲಕ್ಷ ರು.ಗಳ ಬಾಂಡ್ ವಿತರಣೆ ಮಾಡಲಾಗಿದೆ ಎಂದರು. ಪಿ.ಎನ್. ಆಂಜಿನಪ್ಪ, ರವಿಕುಮಾರ್, ಶಿವ, ಮಂಜುನಾಥ್, ಕೃಷ್ಣಪ್ಪ, ಮಹಬೂಬ್ ಬಾಷಾ ಇದ್ದರು.