ಕಾರ್ಖಾನೆ ಮೇಲೆ ಕಲ್ಲು ತೂರಾಟ
ಕೋಲಾರ: ತಾಲೂಕಿನ ನರಸಾಪುರದ ಬಡ್ವಾ ಎಂಬ ಖಾಸಗಿ ಕಾರ್ಖಾನೆಯಲ್ಲಿ ಕನ್ನಡಿಗರನ್ನು ಕೆಲಸದಿಂದ ತೆಗೆದು ಹೊರಗಿನವರನ್ನು ಕೆಲಸಕ್ಕೆ ಸೇರಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಕಾರ್ಖಾನೆಯ ಮೇಲೆ ಕಲ್ಲು ತೂರಾಡಿ ಗಾಜುಗಳನ್ನು ಪುಡಿ ಪುಡಿ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಕಾರ್ಖಾನೆ ಮಾಲೀಕರು ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲವೆಂದು ಪ್ರತಿಭಟನಾಕಾರರು ದೂರಿದ್ದಾರೆ. ವಿಷಯ ತಿಳಿದ ವೇಮಗಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪು ಚದುರಿಸಲು ಲಘುಲಾಠಿ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಜಗ್ಗದ ಗ್ರಾಮಸ್ಥರು, ತೆಗೆದು ಹಾಕಿರುವ ಕಾರ್ಮಿಕರನ್ನು ಕೂಡಲೇ ಸೇರಿಸಿಕೊಳ್ಳಬೇಕು. ಸರ್ಕಾರ ಕನ್ನಡ ವಿರೋಧಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದ್ದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ವೇಮಗಲ್ ಪಿಎಸ್ಐ ಯಶವಂತ್ ಪ್ರಯತ್ನ ಮುಂದುವರೆಸಿದ್ದಾರೆ.
ಅಂತಾರಾಷ್ಟ್ರೀಯ ವಿಚಾರಗೋಷ್ಠಿ
ಮೈಸೂರು: ಮೌಲ್ಯಮಾಪಕರ ಸಂಸ್ಥೆ ಮೈಸೂರು ಶಾಖೆ ವತಿಯಿಂದ ನ.23 ಮತ್ತು 24 ರಂದು ಲಲಿತಮಹಲ್ ಹೊಟೇಲ್ನಲ್ಲಿ ಅಂತಾರಾಷ್ಟ್ರೀಯ ಮೌಲ್ಯಮಾಪನ ಕ್ಷೇತ್ರದಲ್ಲಿ ಜಾಗತಿಕ ಆರ್ಥಿಕತೆ ಮತ್ತು ಗಂಡಾಂತರ ನಿರ್ವಹಣೆ ಕುರಿತು ಅಂತಾರಾಷ್ಟ್ರೀಯ ವಿಚಾರಗೋಷ್ಠಿ ಆಯೋಜಿಸಲಾಗಿದೆ.
ನ.23ರ ಬೆಳಗ್ಗೆ 10ಕ್ಕೆ ಸಂಸದ ಎಚ್.ವಿಶ್ವನಾಥ್ ವಿಚಾರಗೋಷ್ಠಿ ಉದ್ಘಾಟಿಸುವರು. ಮೈಸೂರು ವಿವಿ ಐಎಸ್ಐಎಂ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರೊ.ಶಾಲಿನಿ ಆರ್. ಅರಸ್ ಅವರು ದಿಕ್ಸೂಚಿ ಭಾಷಣ ಮಾಡುವರು. ಮೇಯರ್ ಎನ್.ಎಂ. ರಾಜೇಶ್ವರಿ ಅವರು ತಾಂತ್ರಿಕ ವಿಚಾರಧಾರೆಯ ಪುಸ್ತಕ ಬಿಡುಗಡೆಗೊಳಿಸುವರುಎಂದು ವಿಚಾರಗೋಷ್ಠಿಯ ಸಂಚಾಲಕ ಎಂ.ಎಸ್. ವಿಜಯಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಮೆರಿಕ, ಕೆನಡಾ, ಸ್ವಿಡನ್, ಆಸ್ಟ್ರೇಲಿಯಾ ಹಾಗೂ ಭಾರತದ 23 ವಿದ್ವಾಂಸರು ವಿಚಾರಗೋಷ್ಠಿಯಲ್ಲಿ ತಮ್ಮ ವಿಚಾರ ಮಂಡಿಸಲಿದ್ದಾರೆ.