ಕಾಲುಬಾಯಿ: ಸದನದಲ್ಲಿ ಧ್ವನಿ ಎತ್ತುವೆ
ಕ.ಪ್ರ.ವಾರ್ತೆ ಕೋಲಾರ ನ.21
ಕೋಲಾರ ಸೇರಿದಂತೆ ರಾಜ್ಯದ ವಿವಿಧ ಕಡೆ ಕಾಲುಬಾಯಿ ರೋಗದಿಂದ ಸಾವಿರಾರು ಹಸುಗಳು ಸತ್ತಿರುವುದು, ಪರಿಹಾರ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಾವು ನ.25 ರಂದು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಬೆಳಕು ಚೆಲ್ಲುವುದಾಗಿ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್. ರಮೇಶ್ ಕುಮಾರ್ ಭರವಸೆ ನೀಡಿದರು.
ನಗರದ ಅಂತರಗಂಗೆ ರಸ್ತೆಯ ಲಯನ್ಸ್ ಕ್ಲಬ್ ಭವನದಲ್ಲಿ ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘದಿಂದ ಕಾಲುಬಾಯಿ ಜ್ವರದಿಂದ ಮೃತಪಟ್ಟಿರುವ ಜಾನುವಾರುಗಳಿಗೆ 50 ಸಾವಿರ ಪರಿಹಾರ, ಈ ರೋಗ ಸಂಪೂರ್ಣ ನಿಯಂತ್ರಣ ಹಾಗೂ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಾಮಾಣಿಕ ಪ್ರಯತ್ನ: ಕಾಲುಬಾಯಿ ಜ್ವರದಿಂದ ಸತ್ತಿರುವ ಜಾನುವಾರುಗಳ ಸಂಖ್ಯೆ, ಲಸಿಕೆ ನೀಡಿರುವ ವಿವರ, ರೋಗ ತಡೆಗಟ್ಟಲು ಕೈಗೊಂಡ ಕ್ರಮ, ಕಾಲು ಬಾಯಿ ಜ್ವರದಿಂದ ಹಾಲು ಉತ್ಪಾದನೆಯ ಮೇಲೆ ಆಗುವ ದುಷ್ಪರಿಣಾಮ, ಮಾರಕ ರೋಗಕ್ಕೆ ಕಾರಣ ತಿಳಿದು ಔಷೋದೋಪಚಾರ ಕೈಗೊಳ್ಳಲು ಆತ್ಯಾಧುನಿಕ ಪ್ರಾಯೋಗಾಲಯ ಸ್ಥಾಪನೆ ಸೇರಿದಂತೆ ಇನ್ನಿತರ ಮಾಹಿತಿ ನೀಡಿದಲ್ಲಿ ಸರ್ಕಾರ ಗಮನ ಸೆಳೆದು ಜಾನುವಾರುಗಳ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಸರ್ಕಾರದ ಮೇಲೆ ಒತ್ತಡ: ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕಾಲುಬಾಯಿ ಜ್ವರಕ್ಕೆ 1,927 ಹಸುಗಳು ಸತ್ತಿವೆ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಮ್ಮ ಹಂತದಲ್ಲಿ ರಾಸುಗಳ ಸಂರಕ್ಷಣೆ, ಲಸಿಕೆ ಹಾಕುವುದು ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೃತಪಟ್ಟಿರುವ ರಾಸುಗಳಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸುವ ಸಂಬಂಧ ಶಾಸಕ ರಮೇಶ್ ಕುಮಾರ್ ಹಾಗೂ ಜಿಲ್ಲೆಯ ಇನ್ನಿತರ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಲಿದ್ದಾರೆಂದು ತಿಳಿಸಿದರು.
ರೈತರಿಗೆ ಮನವರಿಕೆ ಮಾಡಿ: ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಲಸಿಕೆ ಹಾಕಿಸುವುದರಿಂದ ಹಸುಗಳು ಉಳಿಯುತ್ತವೆ ಅನ್ನೋದು ರೈತರಿಗೆ ಮನವರಿಕೆ ಮಾಡುವ ಕೆಲಸ ವಿಜ್ಞಾನಿಗಳು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಆಗಬೇಕಾಗಿದೆ. ಕೋಲಾರ ಸೇರಿದಂತೆ ರಾಜ್ಯದಲ್ಲಿ ಹಸುಗಳಿಗೆ ಲಸಿಕೆ ಹಾಕಲು ಪಲ್ಸ್ ಪೋಲಿಯೋ ಮಾದರಿಯಲ್ಲಿ ಆಂದೋಲನಕ್ಕೆ ಸರ್ಕಾರ ಚಾಲನೆ ನೀಡಬೇಕೆಂದು ಒತ್ತಾಯಿಸಿದರು.
ಭಿನ್ನ ಹೇಳಿಕೆಗಳು: ಕಾಲುಬಾಯಿ ಜ್ವರದ ಬಗ್ಗೆ ಪಶು ಇಲಾಖೆಯ ಅಧಿಕಾರಿಗಳು ಮತ್ತು ವಿಜ್ಞಾನಿಗಳು ನೀಡುತ್ತಿರುವ ಹೇಳಿಕೆಗಳು, ಸಮರ್ಥನೆಗಳು ಭಿನ್ನವಾಗಿವೆ. ವಿಜ್ಞಾನಿಗಳು ಕಾಲುಬಾಯಿ ಜ್ವರದಿಂದ ಕೋಲಾರದಲ್ಲಿ ಹಸುಗಳು ಸತ್ತಿಲ್ಲ, ಬೇರೆ ಯಾವುದೋ ಕಾರಣಗಳು ಇವೆ ಎಂದು ಹೇಳುತ್ತಿರುವುದರಿಂದ ರೈತರು ಗೊಂದಲಕ್ಕೆ ಸಿಲುಕಿರುವುದರಿಂದ ಕೂಡಲೇ ನಿಜ ಸಂಗತಿ ತಿಳಿಸಬೇಕೆಂದು ತಿಳಿಸಿದರು.
ರಾಜ್ಯದಲ್ಲಿ ಸುಮಾರು 7,500 ಹಸುಗಳು ಸತ್ತಿವೆ. ಈ ಪೈಕಿ ಕೋಲಾರ ಜಿಲ್ಲೆಯಲ್ಲೇ ಸುಮಾರು 1,927 ಹಸುಗಳು ಕಾಲುಬಾಯಿ ಜ್ವರಕ್ಕೆ ಬಲಿಯಾಗಿದ್ದು ಶ್ರೀನಿವಾಸಪುರ ತಾಲೂಕಿನಲ್ಲಿ 300, ಮುಳಬಾಗಿಲು-500, ಬಂಗಾರಪೇಟೆ-200, ಮಾಲೂರು 260 ಹಾಗೂ ಕೋಲಾರ ತಾಲೂಕಿನಲ್ಲಿ 700 ಹಸುಗಳು ಸತ್ತಿರುವುದರಿಂದ ಸರ್ಕಾರ ರೈತರನ್ನು ಆರ್ಥಿಕ ಮತ್ತು ಸಾಮಾಜಿಕ ಸಂಕಟದಿಂದ ಪಾರು ಮಾಡಲು ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರವೇ 25 ಸಾವಿರ ರು. ಪರಿಹಾರ ನೀಡಬೇಕು, ಕೇಂದ್ರ ಸರ್ಕಾರ 25 ಸಾವಿರ ನೀಡಿ ರೈತರನ್ನು ಕಾಪಾಡಬೇಕು. ರಾಜ್ಯದಲ್ಲಿ ಅನೇಕ ಹಾಲು ಉತ್ಪಾದಕರ ಸಂಘಗಳು ಆರ್ಥಿಕವಾಗಿ ಕುಗ್ಗಿರುವುದರಿಂದ ರಾಜ್ಯ ಸರ್ಕಾರ ಈ ಸಂಘಗಳಿಂದ ಪರಿಹಾರ ದೊರೆಕಿಸುವ ಪ್ರಯತ್ನ ಕೈಬಿಟ್ಟು ತಾನೇ ಪರಿಹಾರ ನೀಡಬೇಕು, ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರುವ ಹಾಲು ಒಕ್ಕೂಟಗಳಿಂದ ಹಣ ಸಂಗ್ರಹಣೆ ಮಾಡಿ ತನ್ನ ಪಾಲಿನ 16,400 ರು. ಜೊತೆ ಸೇರಿ ಪಾವತಿಸಬೇಕೆಂದು ತಿಳಿಸಿದರು.
ದುಂಡು ಮೇಜಿನ ಸಭೆಯಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಾಣ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿ ರವೀಂದ್ರ ಹೆಗಡೆ, ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಡಾ. ರಘುರಾಮೇಗೌಡ, ಕೋಮುಲ್ ಪಶು ವಿಭಾಗದ ಅಧಿಕಾರಿ ಡಾ. ರವಿ ಹಾಗೂ ಗೋಪಾಲಕರು ಇದ್ದರು. ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು.
ಜಾನುವಾರು ಸಾವಿಗೆ ನಿಖರ ಕಾರಣ ಸಿಕ್ಕಿಲ್ಲ
ಕೋಲಾರ: ಜಿಲ್ಲೆಯಲ್ಲಿ ಸಾವಿರಾರು ಜಾನುವಾರುಗಳಿಗೆ ಕಾಲುಬಾಯಿ ಜ್ವರ ಹರಡಿರುವುದು ನಿಜವಾದರೂ ಹಸು, ಕರು ಮತ್ತು ದನಗಳು ಕಾಲು ಬಾಯಿ ಜ್ವರದಿಂದಲೇ ಸತ್ತಿವೆ ಎಂಬುದಕ್ಕೆ ಈವರೆಗೆ ಯಾವುದೇ ಪುರಾವೆ ಸಿಕ್ಕಿಲ್ಲವೆಂದು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಾಣ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿ ರವೀಂದ್ರ ಹೆಗಡೆ ಸ್ಪಷ್ಟಪಡಿಸಿದರು.
ನಗರದ ಲಯನ್ಸ್ ಕ್ಲಬ್ ಭವನದಲ್ಲಿ ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘದಿಂದ ಹಮ್ಮಿಕೊಂಡಿದ್ದ ಕಾಲುಬಾಯಿ ಜ್ವರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಇತ್ತೀಚೆಗೆ ಸಾವಿರಾರು ಜಾನುವಾರುಗಳು ವೈರಾಣುಗಳ ಕಾರಣದಿಂದ ಸತ್ತಿವೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಬಂದ ನಂತರ ಬೇರೆ ಯಾವುದೋ ಕಾರಣದಿಂದ ಹಸುಗಳು ಸತ್ತಿದ್ದು ಇದರ ಬಗ್ಗೆ ಹೆಚ್ಚಿನ ಆಧ್ಯಯನ ನಡೆಯುತ್ತಿರುವುದರಿಂದ ಈಗಲೇ ಖಚಿತ ನಿರ್ಧಾರ ತಿಳಿಸಲಾಗದು ಎಂದರು.
ರಾಜ್ಯದ ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದಲ್ಲಿ ಕೋಲಾರ ಜಿಲ್ಲೆಯ ಪರಿಸ್ಥಿತಿ ಭಿನ್ನವಾಗಿದೆ. ವಿಜ್ಞಾನಿಗಳ ಪ್ರಕಾರ ವೈರಸ್ನಿಂದ ಹಸುಗಳು ಸತ್ತಿಲ್ಲ ಎನ್ನಲಾಗುತ್ತಿದ್ದರೆ, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾತ್ರ ವೈರಸ್ನಿಂದ ಹಸುಗಳು ಸತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸತ್ತಿರುವ ಹಸುಗಳ ಅಂಗಾಂಗಗಳನ್ನು ಪ್ರಾಯೋಗಲಾಯಕ್ಕೆ ಕಳುಹಿಸಿದ್ದು ಅಲ್ಲಿಂದ ವರದಿ ಬಂದ ನಂತರವೇ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದರು.
20 ಸಾವಿರ ಕೋಟಿ ನಷ್ಟ: ಕೋಲಾರ ಸೇರಿದಂತೆ ರಾಜ್ಯದಲ್ಲಿ ಇತ್ತೀಚೆಗೆ ಸತ್ತಿರುವ ಜಾನುವಾರುಗಳಿಂದಾಗಿ ಸುಮಾರು 20 ಸಾವಿರ ಕೋಟಿ ನಷ್ಟವಾಗಿದೆ. ಕೃಷಿಯ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ, ಶೇ. 85ರಷ್ಟು ಹಸುಗಳು ಕಾಲುಬಾಯಿ ಜ್ವರದಿಂದಾಗಿ ರೋಗ ನಿಯಂತ್ರಣ ಶಕ್ತಿಯನ್ನು ಕಳೆದುಕೊಂಡಿದ್ದು ರೈತರು ಇನ್ನು ಮುಂದೆ ಲಸಿಕೆ ಹಸುಗಳಿಗೆ ಹಾಕಿಸಲು ಹಿಂದೇಟು ಹಾಕದೆ ಪ್ರತಿ ಆರು ತಿಂಗಳಿಗೆ ಒಮ್ಮೆ ಲಸಿಕೆ ಹಾಕಿಸುವುದರಿಂದ ಜೀವ ಉಳಿಸಬಹುದು ಎಂದು ಸಲಹೆ ನೀಡಿದರು.
ಮಳೆಗಾಲದಲ್ಲಿ ವೈರಸ್ ಹೆಚ್ಚುವುದರಿಂದ ಮುಂಗಾರು ಹಂಗಾಮಿಗೆ ಮುಂಚೆಯೇ ಹಾಸುಗಳಿಗೆ ಲಸಿಕೆ ಹಾಕಿಸುವುದು ಒಳ್ಳೆಯದು. ಜೊತೆಗೆ ಹಸುಗಳಲ್ಲಿ ಕಾಣುವ ಗಳಲೆ ರೋಗ(ಕಂಕುಳ ಮೇಲೆ ಕಾಣುವ ಏಳುವೆ ಗಂಟು)ನಿವಾರಣೆ ಮಾಡದಿದ್ದರೆ ಹಸುಗಳು ಬೇರೆ ಬೇರೆ ವೈರಾಣುಗಳಿಂದಾಗಿ ಜೀವ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದರು.