'ಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಸೇವೆ'
ಚಿಂತಾಮಣಿ: ರೈತರ ಆರ್ಥಿಕ ಅಭಿವೃದ್ಧಿಗಾಗಿ ಕೋಲಾರ ಡಿಸಿಸಿ ಬ್ಯಾಂಕ್ ಉಳಿಸಿಕೊಳ್ಳಲು ಪ್ರಾಮಾಣಿಕ ಸೇವೆ ಮಾಡುತ್ತೇನೆ ಎಂದು ನೂತನ ನಿರ್ದೇಶಕ ಸತ್ಯನಾರಾಯಣ ಮಹೇಶ್ ಹೇಳಿದರು. ಪಟ್ಟಣದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಪ್ರಥಮ ಬಾರಿಗೆ ಆಗಮಿಸಿದ್ದ ನಿರ್ದೇಶಕರನ್ನು ಬ್ಯಾಂಕಿನ ವ್ಯವಸ್ಥಾಪಕ ಬಾಲಾಜಿ ಹಾಗೂ ಸಿಬ್ಬಂದಿ ಸ್ವಾಗತಿಸಿ ಹೂ ಮಾಲೆ ಹಾಕಿ ಶುಭ ಹಾರೈಸಿದರು. ಸತ್ಯನಾರಾಯಣ ಮಹೇಶ್ ಮಾತನಾಡಿ, ಹಲವರಿಂದ ಬ್ಯಾಂಕು ಅವನತಿ ಹಂತಕ್ಕೆ ತಲುಪಿತ್ತು. ಕಳೆದ 20 ವರ್ಷಗಳಿಂದ ಎಲ್ಲಾ ಜನಸಾಮಾನ್ಯರಿಗೆ ಸಹಕಾರ ಕ್ಷೇತ್ರದಿಂದ ದೊರೆಯುವ ಸವಲತ್ತುಗಳು ದೊರೆಯದೇ ವಿಫಲಗೊಂಡಿವೆ ಎಂದು ತಿಳಿಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ 2 ಜಿಲ್ಲೆಗಳಿಂದ ಬರ ಪರಿಸ್ಥಿತಿ ಇದ್ದಾಗ ಬಿಜೆಪಿ ಸರ್ಕಾರ ಚಿಂತಾಮಣಿ ಕ್ಷೇತ್ರಕ್ಕೆ 3.50 ಕೋಟಿ ರೈತರಿಗೆ ಸಾಲ ಮನ್ನಾ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸಿದೆ ಎಂದರು. ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ. ಬೈಯ್ಯನ್ನ, ಯನಮಲಪಾಡಿ ಚಂದ್ರಾರೆಡ್ಡಿ, ನಗರಸಭಾ ಸದಸ್ಯೆ ಸುಜಾತಮ್ಮ ಶಿವಣ್ಣ, ಬ್ಯಾಂಕಿನ ವ್ಯವಸ್ಥಾಪಕ ಬಾಲಾಜಿ, ಗೋವಿಂದ್, ಕಾಗತಿ ನಾಗರಾಜ್, ಅಪ್ಪಣ್ಣ, ಮಹೇಶ್, ಅರುಣ್, ಕುರುಟಹಳ್ಳಿ ಮಂಜುನಾಥ್, ಪದ್ಮಾವತಮ್ಮ ಇದ್ದರು.