ಬೀದಿ ನಾಯಿಗಳ ದಾಳಿ 7 ಮಕ್ಕಳಿಗೆ ತೀವ್ರ ಗಾಯ
ಕ.ಪ್ರ.ವಾರ್ತೆ ಕೋಲಾರ ನ. 21
ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಪರಿಣಾಮ ಸುಮಾರು 7ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಕೋಲಾರ ನಗರದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಗುರುವಾರ ನಡೆದಿದೆ.
ನಗರದ 35 ನೇ ವಾರ್ಡ್‌ಗೆ ಸೇರುವ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಹತ್ತಾರು ನಾಯಿಗಳ ಹಿಂಡು ದಾಳಿ ಮಾಡಿರುವುದರಿಂದ ಮಕ್ಕಳು ಗಾಯಗೊಂಡಿದ್ದು ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆ ಸೇರಿದಂತೆ ವಿವಿಧ ಕಡೆ ಚಿಕಿತ್ಸೆ ಪಡೆದಿದ್ದಾರೆ.
ನಾಯಿಗಳ ದಾಳಿಯಿಂದ ಗಾಯಗೊಂಡ ಮಕ್ಕಳನ್ನು ಬೀಡಿ ಕಾರ್ಮಿಕರ ಕಾಲೋನಿಯ ಶ್ರೇಯಾ ಸಲ್ತಾನ್(5)ಅರಬಿನ್‌ತಾಜ್(6), ಷಾವುಲ್(4), ತಸ್ಮಿಯಾ(11), ಶಾಬಾಜ್(2), ಸುರೇಯಾ (8), ತಬ್ರೇಜ್ (6) ಎಂದು ಗುರುತಿಸಲಾಗಿದೆ.
ನಗರದ ಬಹುತೇಕ ಕಡೆ ಮಾಂಸದ ಅಂಗಡಿಗಳ ಮುಂದೆ ನಾಯಿಗಳ ಓಡಾಟ ಹೆಚ್ಚಾಗಿದೆ. ಶಾಲಾ ಮಕ್ಕಳು, ವೃದ್ಧರು, ತರಕಾರಿ ಮತ್ತು ಹಾಲು ಕೊಂಡೊಯ್ಯುವ ಜನರು ನೆಮ್ಮದಿಯಿಂದ ರಸ್ತೆಗಳಲ್ಲಿ ಓಡಾಡಲು ಭಯ ಪಡುವಂತಾಗಿದೆ. ಬೀದಿ ನಾಯಿಗಳ ಹಾವಳಿ ತಡೆಯಲು ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ಹಾಗೂ ಗಾಯಗೊಂಡಿರುವ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ನಾಯಿಗಳನ್ನು ಕೋಲಾರದಿಂದ ಹೊರಗಟ್ಟದಿದ್ದರೆ ನಗರಸಭೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭೆಯ ಆಯುಕ್ತ ಜಗದೀಶ್ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಸಾರ್ವಜನಿಕರು ಬೀದಿ ನಾಯಿಗಳು ಮನುಷ್ಯರ ರಕ್ತ ಹೀರುತ್ತಿದ್ದು ಕೂಡಲೇ ನಾಯಿಗಳನ್ನು ವಶಕ್ಕೆ ತೆಗೆದುಕೊಂಡು ಜನತೆಯ ಪ್ರಾಣ ರಕ್ಷಣೆ ಮಾಡುವಂತೆ ಒತ್ತಾಯಿಸಿದರು.
ಜನತೆಯ ಸಮಸ್ಯೆ ಅರಿತ ನಗರಸಭೆ ಆಯುಕ್ತ ಜಗದೀಶ್, ಆಕ್ರೋಶಗೊಂಡ ಜನತೆಯನ್ನು ಸಮಾಧಾನಪಡಿಸಿ ಮಾತನಾಡಿ, ಬೀಡಿ ಕಾರ್ಮಿಕರ ಕಾಲೋನಿ, ರೆಹಮತ್‌ನಗರ ಬಡಾವಣೆ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ವಿವಿಧ ವಾರ್ಡುಗಳಲ್ಲೂ ನಾಯಿಗಳ ಹಾವಳಿ ಹೆಚ್ಚಿದೆ. ಇದಕ್ಕೆ ಬೇರೆಡೆಯಿಂದ ನಾಯಿಗಳನ್ನು ತಂದು ನಗರದಲ್ಲಿ ಬಿಟ್ಟಿರುವ ಅನುಮಾನವಿದ್ದು ಕೂಡಲೇ ನಾಯಿ ಹಿಡಿಯುವವರನ್ನು ಕರೆಸಿ ಸಮಸ್ಯೆ ನಿವಾರಣೆ ಮಾಡುವುದಾಗಿ ಭರವಸೆ ನೀಡಿದರು.
ನಗರಸಭೆ ಸದಸ್ಯರಾದ ಸಲ್ಲಾವುದ್ದೀನ್ ಬಾಬು, ಸೋಮಶೇಖರ್, ಮುರಳಿಗೌಡ ಇನ್ನಿತರರು ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.