ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ: ಸುಧಾಕರ್
ಚಿಕ್ಕಬಳ್ಳಾಪುರ: ಸರ್ಕಾರಿ ಯೋಜನೆಗಳನ್ನು ಜನರು ಸದುಪಯೋಗಪಡಿಸಿಕೊಳ್ಳಲು ಜಾಗೃತಿ ಮೂಡಿಸಬೇಕಾಗಿದ್ದು, ಇದಕ್ಕಾಗಿ ಕಾರ್ಯಕ್ರಮದ ಮಾಹಿತಿಯನ್ನೊಳಗೊಂಡ ನಾಮಫಲಕಗಳನ್ನು ಕಚೇರಿಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಶಾಸಕ ಡಾ.ಕೆ. ಸುಧಾಕರ್ ಸೂಚಿಸಿದರು.
ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಮಂಚೇನಹಳ್ಳಿ ಹೋಬಳಿಗೆ ಸೇರಿದ ಆರು ಗ್ರಾಪಂಗಳಲ್ಲಿ ಹಮ್ಮಿಕೊಂಡಿರುವ ಪ್ರಗತಿ ಪರಿಶೀಲನಾ ಸಭೆಯ ಎರಡನೇ ದಿನದ ಕಾರ್ಯಕ್ರಮ ಅಂಗವಾಗಿ ಪುರದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿ, ಪುರ ಪಂಚಾಯಿತಿಯ ಅರಸಾಲುಬಂಡೆ ಗ್ರಾಮದಲ್ಲಿ ಬೋರುವೆಲ್, ಪಂಪ್ ಇದ್ದು, ಇದರ ಲಾಭ ಪಡೆಯಲು ವಿದ್ಯುತ್ ಸಂಪರ್ಕ ಇಲ್ಲದೇ ತೊಂದರೆ ಉಂಟಾಗಿದೆ. ಆದಷ್ಟು ಬೇಗ ವಿದ್ಯುತ್ ಸಂಪರ್ಕ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಪಂಚಾಯಿತಿಯಲ್ಲೂ ಸರ್ಕಾರದ ಯೋಜನೆಗಳು, ಅದನ್ನು ಪಡೆಯುವ ರೀತಿ, ಅದರಿಂದ ನಾಗರಿಕರು, ರೈತರಿಗೆ ಅಗುವ ಲಾಭವನ್ನು ವಿವರಿಸುವ ಫಲಕಗಳನ್ನು ಅಳವಡಿಸಬೇಕು ಎಂದರು. ಪುರ, ಜರಬಂಡಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅನೇಕ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಕಂದಾಯ, ಬೆಸ್ಕಾಂ ಇತರೆ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಜನರ ವಿರೋಧಕ್ಕೆ ಗುರಿಯಾಗಬೇಕಾಗುತ್ತದೆ. ಆದಷ್ಟು ಬೇಗ ಜನರ ಸಮಸ್ಯೆ ಪರಿಹರಿಸಲು ಯತ್ನಿಸಿ ಎಂದು ಅಧಿಕಾರಿಗಳನ್ನು ತರಾಟೆಗೆ ಗೆದುಕೊಂಡರು. ಜಲಾನಯನ ಅಭಿವೃದ್ಧಿಯ ತಲಾ 50 ಸಾವಿರ ರು. ಮೊತ್ತದ ಚೆಕ್ಗಳನ್ನು 30 ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿದರು.
ಆರೋಗ್ಯವೇ ಭಾಗ್ಯ: ಗ್ರಾಮೀಣ ಭಾಗದ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಲು ಶೌಚಾಲಯ ಮುಖ್ಯ ಎಂದರು.
ಮಂಚೇನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ಪಣತೊಟ್ಟಿದ್ದು ಇಲ್ಲಿ ಅಂಬೇಡ್ಕರ್ ಭವನ, ಶಾದಿ ಮಹಲ್, ಶಾಲಾ ಕಟ್ಟಡಕ್ಕೆ 14 ಲಕ್ಷ ರು. ಅನುದಾನ ನೀಡುವುದರ ಜತೆಗೆ ಇತರೆ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದಾಗಿ ಭರವಸೆ ನೀಡಿದರು. ಜಿಪಂ ಸದಸ್ಯೆ ರಾಧಮ್ಮ, ಗೌರಿಬಿದನೂರಿನ ತಹಸೀಲ್ದಾರ್ ಡಾ. ಭಾಸ್ಕರ್, ತಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ತಾಪಂ ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯ ನಾರಾಯಣಸ್ವಾಮಿ, ಕಾರ್ಯ ನಿರ್ವಹಣಾಧಿಕಾರಿ ರೆಡ್ಡಪ್ಪ, ಮಂಚೇನಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀರಂಗಪ್ಪ, ಪುರ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ರಮೇಶ್, ಗಂಗಾಧರಪ್ಪ, ಶಿವಶಂಕರ ಇದ್ದರು.