ರೈತರ ಸಂಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ: ಆರೋಪ
ಕ.ಪ್ರ.ವಾರ್ತೆ ಗೌರಿಬಿದನೂರು ನ. 21
ರಾಜ್ಯ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಶೋಚನೀಯ ಹಾಗೂ ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಜಿ.ವಿ ಲೋಕೇಶ್‌ಗೌಡ ಆರೋಪಿಸಿದರು.
ಮೆಕ್ಕೆಜೋಳಕ್ಕೆ 1,800 ರು. ಬೆಂಬಲ ಬೆಲೆ ನೀಡುವಂತೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರ 1310 ರು. ಬೆಂಬಲ ನಿಗದಿಪಡಿಸಿದ್ದು ಆದರೆ ರಾಜ್ಯ ಸರ್ಕಾರ ಮೆಕ್ಕೆ ಜೋಳ ಬೆಳೆಗಾರರಿಗೆ ಪ್ರೋತ್ಸಾಹ ಧನವನ್ನು ಕನಿಷ್ಠ ರೀತಿಯಲ್ಲಿ ಪ್ರಕಟಿಸದಿರುವುದು ನಿಜಕ್ಕೂ ಶೋಚನೀಯ. ರೈತರು ನಿಗದಿಪಡಿಸಿರುದಂತಹ 1,800 ರು. ಪ್ರೋತ್ಸಾಹ ಧನವನ್ನು ಸರ್ಕಾರ ನಿಗದಿ ಮಾಡದಿದ್ದರೆ ಉಗ್ರ ಚಳವಳಿ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ಜೊತೆಗೆ ಪಟ್ಟಣ ಪ್ರದೇಶದಲ್ಲಿ ನಿಯಮ ಬಾಹಿರವಾಗಿ ಮೆಕ್ಕೆಜೋಳ ಸಗಟು ವ್ಯಾಪಾರವನ್ನು ಮಾಡಲಾಗುತ್ತಿದೆ, ಇದು ನಿಯಮಕ್ಕೆ ವಿರುದ್ಧವಾಗಿದ್ದು ಈ ವ್ಯಾಪಾರವನ್ನು ತಕ್ಷಣ ರದ್ದುಪಡಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಮೆಕ್ಕೆಜೋಳ ಸಗಟು ವ್ಯಾಪಾರವನ್ನು ವರ್ಗಾಯಿಸುವಂತೆ ಕ್ರಮಕೈಗೊಂಡು ಆದೇಶ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಎಂ.ಆರ್. ಲಕ್ಷ್ಮೀನಾರಾಯಣ ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಆರ್. ಸನತ್‌ಕುಮಾರ್, ಸಹಕಾರ್ಯದರ್ಶಿ ಜಿ. ರಾಜಣ್ಣ, ರೈತ ಮುಖಂಡ ಮುದ್ದುವೀರಪ್ಪ ಮುಂತಾದವರು ಭಾಗವಹಿಸಿದ್ದರು.
ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ
ಗೌರಿಬಿದನೂರು: ಪಕ್ಷದ ಬಲವರ್ಧನೆಗಾಗಿ ಡಿಸೆಂಬರ್‌ನಲ್ಲಿ ತಾಲೂಕಿನಾದ್ಯಂತ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಎನ್. ಜ್ಯೋತಿರೆಡ್ಡಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಾರ ನಡೆದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇಮಕಾತಿ ವಿಷಯದಲ್ಲಿ ಜೆಡಿಎಸ್ ಸದಸ್ಯರು ತಮ್ಮ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದು ಇದು ಸತ್ಯಕ್ಕೆ ದೂರವಾದದ್ದು ಎಂದರು. ನಮ್ಮ ಪಕ್ಷ ಪ್ರಾದೇಶಿಕ ಪಕ್ಷವಾಗಿದ್ದು, ಹಲವು ಸಿದ್ಧಾಂತಗಳನ್ನು ಅಳವಡಿಸಿಕೊಂಡಿದೆ. ಜಿಲ್ಲಾದ್ಯಂತ ಗೌರಿಬಿದನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ನೇತ್ರಾಳ ಸಾವಿನ ವಿರುದ್ಧ ಪ್ರತಿಭಟನೆಗಳು ಹಮ್ಮಿಕೊಂಡಿದ್ದು ನಾವು ಕೂಡ ಮುಂದಿನ ದಿನಗಳಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಲು ಒತ್ತಾಯಿಸುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ಹೊಸೂರು ಹರಿ, ಅಲ್ಲಂಪಲ್ಲಿ ವೇಣು, ಪುರಸಭಾ ಸದಸ್ಯ ಸುಭಾನ್ ಇದ್ದರು.