ಜಿಲ್ಲೆಯ ಮೂರು ಶಾಸಕರಿಗೂ ಸಚಿವ ಸ್ಥಾನ ಸಿಗಲಿ'
ಕೋಲಾರ: ಸಚಿವ ಸಂತೋಷ್ ಲಾಡ್ ಹಗರಣದ ಬಗ್ಗೆ ನಾನೇನು ಪ್ರತಿಕ್ರಿಯಿಸಲಾರೆ. ಮುಖ್ಯಮಂತ್ರಿ ಈ ಬಗ್ಗೆ ಕ್ರಮಗೊಳ್ಳುತ್ತಾರೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಅವರು ನಗರದಲ್ಲಿ ಶುಕ್ರವಾರ ಸುದ್ದಿಗಾರರು ಸಚಿವ ಸಂತೋಷ್ ಲಾಡ್ ಗಣಿ ಹಗರಣ ಮತ್ತು ರಾಜಿನಾಮೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿ, ಸಂತೋಷ್ ಲಾಡ್ ಕುರಿತು ನನಗೆ ಹೆಚ್ಚಿಗೆ ಏನು ಗೊತ್ತಿಲ್ಲ. ಹಾಗಾಗಿ ಪ್ರತಿಕ್ರಿಯಿಸುವುದಿಲ್ಲವೆಂದರು.
ಒಂದು ವೇಳೆ ಸಂತೋಷ್ ಲಾಡ್ ರಾಜಿನಾಮೆ ನೀಡಿದಲ್ಲಿ ಜಿಲ್ಲೆಯವರಿಗೆ ಸಚಿವ ಸ್ಥಾನ ಸಿಗುವುದೇ ಎಂಬುದಕ್ಕೆ ಉತ್ತರಿಸಿದ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಕೆ.ಆರ್. ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಹಾಗೂ ಬಂಗಾರಪೇಟೆ ಶಾಸಕ ಕೆ.ಎಂ. ನಾರಾಯಣಸ್ವಾಮಿ ಅವರು ಸಚಿವರಾಗಲು ಅರ್ಹರಾಗಿದ್ದಾರೆಂದರು. ಈ ಮೂವರಲ್ಲಿ ಯಾರು ಹಿತವರು ನಿಮಗೆ ಎಂದು ಕೇಳಿದಾಗ, ಮೂವರು ನನಗೆ ಹಿತವರೇ. ಹೈಕಮಾಂಡ್ ಈ ಮೂವರಿಗೂ ಸಚಿವ ಸ್ಥಾನ ನೀಡಿದರೆ ಸಂತೋಷ ಪಡುತ್ತೇನೆಂದು ಆಶಯ ವ್ಯಕ್ತಪಡಿಸಿದರು.