ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಲ ಕಾರ್ಮಿಕ ಪದ್ಧತಿ: ಜಾಗೃತಿ ಅಗತ್ಯ

Srinivasa Murthy VN
Updated On : 23 Nov 2013, 1:26 am

ಕೋಲಾರ: ಬಾಲಕಾರ್ಮಿಕ ಪದ್ಧತಿ ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದರೆ ಪೊಲೀಸರು ಅಥವಾ ಕಾರ್ಮಿಕ ಇಲಾಖೆ ಗಮನಕ್ಕೆ ತರುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ರೇಣುಕಾಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಕಾರ್ಮಿಕ ಇಲಾಖೆ, ವಕೀಲರ ಸಂಘ, ಜಾಗೃತಿ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಗರದ ಆಲ್‌ಅಮೀನ್ ಅಂಜುಮಾನ್ ಶಾಲೆಯಲ್ಲಿ ನಡೆದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಜಾಗೃತಿ ಮತ್ತು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕೆಂಬ ನಿಯಮವಿದೆ, 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಅಪರಾಧವಾಗಿದೆ, ಅಂತಹ ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಾಮಾಜಿಕ ಕಾಳಜಿಯನ್ನು ತೋರಬೇಕು ಎಂದರು.
ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದರಿಂದ ಅವರು ದುಶ್ಚಟಗಳಿಗೆ ಬಲಿಯಾಗುವ ಸಂಭವವಿರುತ್ತದೆ ಎಂದ ಅವರು, ಸಮಾಜದ ಮುಖ್ಯವಾಹಿನಿಗೆ ಅವರು ಬರುವಂತೆ ಮಾಡಲು ಶಾಲೆಗೆ ಕಳುಹಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಿ.ಕೆ. ರವಿ, ಎಲ್ಲಾದರೂ ಉದ್ದಿಮೆ, ವರ್ಕ್‌ಶಾಪ್ ಮತ್ತಿತರೆಡೆ ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದರೆ ಗಮನಕ್ಕೆ ತನ್ನಿ, ನಿಮ್ಮ ಸ್ನೇಹಿತರಾದರೆ ಅವರನ್ನು ಶಾಲೆಗೆ ಬರುವಂತೆ ಪ್ರೇರೇಪಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಸರ್ಕಾರ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ತಂದಿದೆ, ಸರ್ಕಾರಿ ಶಾಲೆಗಳಲ್ಲಿ ಉಚಿತ ಬಟ್ಟೆ, ಬಿಸಿಯೂಟ, ಉಚಿತ ಪುಸ್ತಕ ನೀಡಲಾಗುತ್ತಿದೆ, ಪ್ರತಿಯೊಬ್ಬರು ಶಾಲೆಗೆ ಬರಲೇಬೇಕೆಂಬುದು ಸರ್ಕಾರದ ನೀತಿಯಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ.ವಿ. ರೇಣುಕಾ, ವಕೀಲರ ಸಂಘದ ಅಧ್ಯಕ್ಷ ಟಿ.ಎಂ. ಶಿವಣ್ಣ, ಸಹಾಯಕ ಕಾರ್ಮಿಕ ಆಯುಕ್ತ ಸೋಮಣ್ಣ ಅವರು ಬಾಲ ಕಾರ್ಮಿಕ ಕಾಯಿದೆ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.ಕಾರ್ಮಿಕ ಅಧಿಕಾರಿ ರಾಜಗೋಪಾಲ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಪಿ. ನಾರಾಯಣಸ್ವಾಮಿ, ಅಂಜುನ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಸುಭಾನ್ ಷರೀಫ್, ಅಂಜುಮಾನ್ ನೌಕರರ ಸಂಘದ ಅಧ್ಯಕ್ಷ ರಕೀಬ್ ಉರ್ ರೆಹಮಾನ್, ಪ್ರಾಂಶುಪಾಲರಾದ ಅಕ್ತರ್ ಸಹೀದಾ ಖಾನ್ ಇದ್ದರು.
ಜಾಗೃತಿ ಸಂಸ್ಥೆ ಅಧ್ಯಕ್ಷ ಕೆ.ಆರ್. ಧನರಾಜ್ ನಿರೂಪಿಸಿ, ಅನೀಫ್ ಸ್ವಾಗತಿಸಿ, ಲಕ್ಷ್ಮೀನಾರಾಯಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement