ಆಂಗ್ಲ ವ್ಯಾಮೋಹಕ್ಕೆ ಸಿಲುಕಿ ಕನ್ನಡ ನಿರ್ಲಕ್ಷ್ಯ: ಅಪಾಯಕಾರಿ ಬೆಳವಣಿಗೆ
ಬಂಗಾರಪೇಟೆ: ಆಂಗ್ಲ ವ್ಯಾಮೋಹಕ್ಕೆ ಸಿಲುಕಿ ಮಾತೃ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಪ್ರತಿಯೊಬ್ಬರು ಕನ್ನಡ ಭಾಷೆ ಬೆಳೆವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಶ್ವಥ್ ಹೇಳಿದರು. ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಚುಟುಕು ಚಿಗುರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಆಂಗ್ಲ ವ್ಯಾಮೋಹದ ಗೀಳು ಅಂಟಿಕೊಂಡು, ಇದರ ನಡುವೆ ಕನ್ನಡ ಮರೆಯಾಗುತ್ತಿದೆ. ಮುಂದಿನ ಪೀಳಿಗೆಗೆ ನಮ್ಮ ನೆಲ ಜಲ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗೆ ಬಾಲ್ಯದಿಂದಲೇ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದರೆ ಭಾಷೆ ತಾನಾಗಿಯೇ ಬೆಳೆಯುತ್ತದೆ ಎಂದು ನುಡಿದರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ನಾ. ರಮೇಶ್ ಚುಟುಕು ಸಾಹಿತ್ಯದ ಸಂಕ್ಷಿಪ್ತ ಪರಿಚಯ ಮಾಡಿದರು. ಘಟಕದ ಜಿಲ್ಲಾ ಕಾರ್ಯದರ್ಶಿ ನಾರಾಯಣಪ್ಪ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಪ್ರಾಧಿಕಾರದ ಪರಿವೀಕ್ಷಣಾಧಿಕಾರಿ ಅನಿತಾ, ಉಪ ಪ್ರಾಂಶುಪಾಲ ಶಂಕರಯ್ಯ, ಸಾಹಿತಿ ಚಾಂದ್ಪಾಷ, ವೆಂಕೋಬರಾವ್ ಮಕ್ಕಳಿಗೆ ಚುಟುಕು ಸಾಹಿತ್ಯದ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.ಉಪನ್ಯಾಸಕ ನಟರಾಜ್,ಸಹಾಯಕ ಸಬ್ಇನ್ಸಪೆಕ್ಟರ್ ಗೋವಿಂದರಾಜು,ಕೆ.ಬಿ.ಮೋಹನ್ ಇದ್ದರು.