ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಇಳಿಮುಖ
ಚಿಕ್ಕಬಳ್ಳಾಪರ: ಹಿಂದಿನ ವರ್ಷಕ್ಕೆ ಹೋಲಿಸಿದಾಗ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಅರ್ಧ ಪ್ರಮಾಣದಷ್ಟು ಇಳಿಕೆಯಾಗಿವೆ ಎಂದು ಕೇಂದ್ರ ವಲಯದ ಆರಕ್ಷಕ ಮಹಾ ಅಧೀಕ್ಷಕ ಅಮರ್ ಕುಮಾರ್ ಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧ ಪ್ರಕರಣಗಳನ್ನು ತಗ್ಗಿಸಲು ಶ್ರಮಿಸಿದ ಜಿಲ್ಲಾ ಪೊಲೀಸ್ ಇಲಾಖೆಗೆ ಶಹಭಾಷ್ ಗಿರಿ ನೀಡಿದರು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಿದಾಗ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸುಲಭವಾಗುತ್ತದೆ ಎಂದರು.
ಪ್ರಸ್ತುತ ವರ್ಷದಲ್ಲಿ ಜಿಲ್ಲೆಯಲ್ಲಿ ಶೇ.50 ರಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಇದನ್ನು ನೋಡಿದರೆ ಜಿಲ್ಲೆಯ ಪೊಲೀಸರು ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಪ್ರಸಕ್ತ ಸಾಲಿನಲ್ಲಿ 33 ಕೊಲೆ ಪ್ರಕರಣಗಳು, 4 ದರೋಡೆ ಪ್ರಕರಣಗಳು, 41 ಹಗಲುಕನ್ನ ಪ್ರಕರಣಗಳು, ರಾತ್ರಿ ಕನ್ನ 59 ಪ್ರಕರಣಗಳು ದಾಖಲಾಗಿದ್ದು ರಸ್ತೆ ಅಪಘಾತ ಪ್ರಕರಣ, ದೊಂಬಿ ಪ್ರಕರಣಗಳು ಕಡಿಮೆಯಾಗಿವೆ ಎಂದರು.
ದೆಹಲಿಗೆ ಪೊಲೀಸ್ ತಂಡ: ಜಿಲ್ಲೆಯಲ್ಲಿ ಮಹಿಳೆಯರನ್ನು ವಂಚಿಸಿ ದೆಹಲಿಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಗೆ ಮಾರಾಟ ಮಾಡುತ್ತಿದ್ದ ಜಾಲ ಭೇದಿಸುವುದನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಈಗಾಗಲೇ ಮೂರು ಬಾರಿ ದೆಹಲಿಗೆ ಪೊಲೀಸ್ ತಂಡವನ್ನು ಕಳುಹಿಸಿ ವೇಶ್ಯಾ ಕೂಪಕ್ಕೆ ಸಿಲುಕಿಕೊಂಡಿದ್ದ ಮಹಿಳೆಯರನ್ನು ರಕ್ಷಿಸಿ ಕರೆದುಕೊಂಡು ಬರಲಾಗಿದೆ. ಇದರ ಜತೆಗೆ ಮಹಿಳೆಯರ ಮಾರಾಟದ ಹಿಂದೆ ಇರುವ ಜಾಲದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲೂ ತೀವ್ರ ತನಿಖೆ ಕೈಗೊಂಡು ಮಹಿಳೆಯರ ಮಾರಾಟಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಲಿದೆ ಎಂದರು.
ಜಿಲ್ಲೆಯಲ್ಲಿ ಅಶಾಂತಿಯನ್ನುಂಟು ಮಾಡಲು ಯತ್ನಿಸುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಈಗಾಗಲೇ ಅಪರಾಧ ಹಿನ್ನೆಯುಳ್ಳ 227 ಮಂದಿಗೆ ಯಾವುದೇ ಗಲಾಟೆ ಪ್ರಕರಣಗಳಲ್ಲಿ ಭಾಗವಹಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.
ಪೊಲೀಸ್ ಇಲಾಖೆಗೆ ಜಾಗ: ಉತ್ತಮವಾಗಿ ಕಾರ್ಯ ನಿರ್ವಹಿಸಲು ಜಿಲ್ಲೆಯಲ್ಲಿ ನೂತನ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯನ್ನು ಅಗತ್ಯವಾಗಿ ನಿರ್ಮಾಣ ಮಾಡಬೇಕಾಗಿದೆ ಎನ್ನುವುದು ಸರ್ಕಾರದ ಗಮನದಲ್ಲಿದೆ. ಇದಕ್ಕಾಗಿ ಈಗಾಗಲೇ 2.5 ಕೋಟಿ ರು.ಗಳನ್ನು ಸರ್ಕಾರ ನೀಡಿರುವ ಭರವಸೆಯಂತೆ ಬಿಡುಗಡೆ ಮಾಡಿದೆ. ಅಲ್ಲದೇ ಜಿಲ್ಲಾ ಕೇಂದ್ರದಲ್ಲಿ ಕಚೇರಿ ನಿರ್ಮಾಣಕ್ಕಾಗಿ ಜಾಗವನ್ನೂ ಗುರುತಿಸಲಾಗಿದ್ದು ಆದಷ್ಟು ಬೇಗ ಇದರ ಕಾಮಗಾರಿ ಪ್ರಾರಂಭವಾಗಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಸಿಬ್ಬಂದಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು, ಬಡ್ತಿ, ಸಮಸ್ಯೆಗಳು, ಜಿಲ್ಲಾ ಕೇಂದ್ರದಲ್ಲಿ ಸಂಚಾರದ ಸಮಸ್ಯೆ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಪೊಲೀಸ್ ಇಲಾಖೆಯ ಸಮಗ್ರ ಮಾಹಿತಿ ತಿಳಿಸುವ ಸಲುವಾಗಿ ಹೊಸದಾಗಿ ವೆಬ್ಸೈಟನ್ನು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎನ್. ಶಿವಪ್ರಸಾದ್, ಡಿವೈಎಸ್ಪಿಗಳಾದ ಎ.ಬಿ.ದೇವಯ್ಯ, ಸಣ್ಣತಿಮ್ಮಪ್ಪ ಉಪಸ್ಥಿತರಿದ್ದರು.
ಭದ್ರತೆ ಇಲ್ಲದ ಎಟಿಎಂ ಬಂದ್: ಸರ್ಕಾರದ ಆದೇಶದಂತೆ ಭದ್ರತೆಯಿಲ್ಲದ ಎಟಿಎಂ ಕೇಂದ್ರಗಳನ್ನು ಯಾವುದೇ ಮುಲಾಜಿಲ್ಲದೇ ಮುಚ್ಚಿಸಲಾಗುವುದು ಎಂದು ಕೇಂದ್ರ ವಲಯದ ಆರಕ್ಷಕ ಮಹಾ ನಿರೀಕ್ಷಕ ಅಮರ್ ಕುಮಾರ್ ಪಾಂಡೆ ತಿಳಿಸಿದರು. ಬೆಂಗಳೂರಿನ ಎಟಿಎಂ ಕೇಂದ್ರವೊಂದರಲ್ಲಿ ಮಹಿಳೆಯ ಮೇಲೆ ಭೀಕರವಾಗಿ ಮಚ್ಚಿನಿಂದ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಎಟಿಎಂ ಕೇಂದ್ರದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಇದಕ್ಕಾಗಿ ಮೂರು ದಿನಗಳ ಗಡವನ್ನು ನೀಡಿದ್ದು ಬ್ಯಾಂಕುಗಳವರು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ 54 ಎಟಿಎಂ ಕೇಂದ್ರಗಳಿದ್ದು ಇದರಲ್ಲಿ 37 ಎಟಿಎಂ ಕೇಂದ್ರಗಳಿಗೆ ಭದ್ರತೆ ವ್ಯವಸ್ಥೆ ಒದಗಿಸಲಾಗಿದೆ. ಇನ್ನೂ 27 ಎಟಿಎಂ ಕೇಂದ್ರಗಳಿಗೆ ಭದ್ರತೆ ವ್ಯವಸ್ಥೆ ಇಲ್ಲಾ ಎನ್ನುವ ಮಾಹಿತಿ ಇದ್ದು ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಲಾಗುವುದು ಎಂದರು.