ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗದ ಮೇಳ
- ಪಾ.ಶ್ರೀ.ಅನಂತರಾಮ್
ಕನ್ನಡಪ್ರಭವಾರ್ತೆ, ಕೋಲಾರ, ನ.23
ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಯಾವುದಾದರೊಂದು ಕೆಲ್ಸ ಸಿಕ್ಕಿದ್ರೆ ಸಾಕು ಎಂದು ಕೋಲಾರ ನಗರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಬೃಹತ್ ಉದ್ಯೋಗಮೇಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಹರಿದು ಬರುತ್ತಿದ್ದಾರೆ.
ಕೋಲಾರ ಸೇರಿದಂತೆ ಇನ್ನಿತರ ಕಡೆ ನಿರುದ್ಯೋಗ ಸಮಸ್ಯೆ ಎಷ್ಟು ತೀವ್ರತೆ ಪಡೆದುಕೊಂಡಿದೆ ಎಂಬುದಕ್ಕೆ ಉದ್ಯೋಗ ಮೇಳದ ಮೊದಲ ದಿನವೇ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಬಂದು ಸರದಿ ಸಾಲಿನಲ್ಲಿ ನಿಂತು ಸಂದರ್ಶನ ಎದುರಿಸಿರುವುದೇ ಸಾಕ್ಷಿ.
ಉದ್ಯೋಗಮೇಳದಲ್ಲಿ ಸುಮಾರು 200 ಕಂಪನಿಗಳು ಭಾಗವಹಿಸುವ ನಿರೀಕ್ಷೆಯನ್ನು ಜಿಲ್ಲಾಡಳಿತ ಹೊಂದಿತ್ತಾದರೂ ಮೊದಲ ದಿನ ಕಾಣಿಸಿಕೊಂಡಿದ್ದು ಅರ್ಧದಷ್ಟು ಮಾತ್ರ. ಇವುಗಳ ಪೈಕಿ ಬೆಂಗಳೂರಿನಿಂದ ಬಂದಿದ್ದ ಕಂಪನಿಗಳೇ ಹೆಚ್ಚು.ಉದ್ಯೋಗಮೇಳದಲ್ಲಿ ಸಣ್ಣ ಕೈಗಾರಿಕೋದ್ಯಮಿಗಳ ಕಾರುಬಾರು ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ ನಿಮಗೆ ಕೆಲಸ ಗ್ಯಾರೆಂಟಿ ಎಂದು ಯುವಕರಿಗೆ ಹುರಿದುಂಬಿಸುತ್ತಿದ್ದರು. ಆದರೆ, ನಮ್ಮ ಯುವಕರು ಮಾತ್ರ ಊರು ಬಿಟ್ಟು ಹೋಗಲು ನಿರಾಸಕ್ತಿ ತೋರಿದರು.
ಮೇಳ ಓಕೆ..ಬೆಂಗಳೂರಿಗೆ ಏಕೆ?: ಎರಡು ತಿಂಗಳಿಂದ ಜಿಲ್ಲಾಧಿಕಾರಿ ಡಿ.ಕೆ.ರವಿ ಮತ್ತು ಇನ್ನಿತರ ಇಲಾಖೆಗಳ ಅಧಿಕಾರಿಗಳು ಪಟ್ಟಿರುವ ಶ್ರಮದ ಫಲವಾಗಿ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಬಂದಿದ್ದರಾದರೂ ಅನೇಕ ಕಂಪನಿಗಳ ಪ್ರತಿನಿಧಿಗಳು ನಾಮಕಾವಾಸ್ತೆ ಸಂದರ್ಶನ ನಡೆಸಿ ಮುಂದಿನ ಸಂದರ್ಶನವನ್ನು ಬೆಂಗಳೂರಿನಲ್ಲಿ ನಡೆಸುತ್ತೇವೆ. ಈಗ ನಿಮ್ಮ ದೂರವಾಣಿ ನಂಬರ್ ಕೊಟ್ಟು ಹೋಗಿ, ನಿಮಗೆ ಸಂದರ್ಶನಕ್ಕೆ ಬರಬೇಕಾದ ದಿನವನ್ನು ತಿಳಿಸುತ್ತೇವೆಂದು ಹೇಳಿ ಕಳುಹಿಸಿರುವುದರಿಂದ ಮೇಳಕ್ಕೆ ಬಂದಿದ್ದ ಯುವಕರು ಈ ಕಂಪನಿಗಳ ಮೇಲೆ ಭರವಸೆ ಇಡಬೇಕೆ ಬೇಡವೇ ಎಂದು ಜಿಜ್ಞಾಸೆಗೆ ಒಳಗಾಗಿದ್ದಾರೆ. ಮೇಳದಲ್ಲೇ ನಮ್ಮ ಕೌಶಲ್ಯದ ಬಗ್ಗೆ ತೀರ್ಪು ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನೇಕ ಯುವಕರು 'ಕನ್ನಡಪ್ರಭ'ದೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬಿಎ, ಎಂಎ ಪದವೀಧರರು ಏನಾಗಬೇಕು?: ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಬಿಎ, ಎಂಎ ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಸರ್ಕಾರಿ ಉದ್ಯೋಗ ಕಲ್ಪಿಸಲಾಗುತ್ತಿಲ್ಲ. ಉದ್ಯೋಗ ಮೇಳದಲ್ಲೂ ಬಿಎ ಮತ್ತು ಎಂಎ ಪದವೀಧರರನ್ನು ಕೇಳುವವರು ಇಲ್ಲದಂತಾಗಿದೆ.
ಎಂಜಿನಿಯರ್ಗಳ ನಿರಾಸೆ: ಉದ್ಯೋಗ ಮೇಳದಲ್ಲಿ ಎಂಜಿನಿಯರಿಂಗ್ ಮಾಡಿರುವ ಯುವಕರಿಗೆ ಯಾವುದೇ ಅವಕಾಶ ಸಿಕ್ಕಿಲ್ಲ. ಮೆಕಾನಿಕ್ ಎಂಜಿನಿಯರಿಂಗ್ ಮಾಡಿ ಎರಡು ವರ್ಷಗಳಿಂದ ಕೆಲಸಕ್ಕಾಗಿ ಅಲೆದಾಡುತ್ತಿದ್ದರೂ ಕೆಲಸ ಸಿಗುತ್ತಿಲ್ಲ ಎಂದು ಬೆಂಗಳೂರಿನಿಂದ ಬಂದಿದ್ದ ರಾಜೇಶ್ ಶರ್ಮ ನೊಂದು ನುಡಿದರು. ಉದ್ಯೋಗ ಮೇಳ ನಡೆಸುವವರು ಮೊದಲು ಯಾವ ವಿಭಾಗಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕಾಗಿದೆ. ಎಲ್ಲಿ ಅವಕಾಶಗಳು ಇವೆ ಎಂಬುದನ್ನು ಸಮೀಕ್ಷೆ ಮಾಡಿ ನಂತರ ಮೇಳಗಳನ್ನು ಆಯೋಜಿಸಬೇಕು. ಸರ್ಕಾರ ಯಾವುದೋ ಮುಲಾಜಿಗೆ ಒಳಗಾಗಿ ಹೆಚ್ಚು ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿ ಪ್ರತಿವರ್ಷ ಸಾವಿರಾರು ಯುವಕರು ಪದವಿ ಮುಗಿಸಿ ಕೆಲಸಕ್ಕೆ ಪದಾಡುವಂತೆ ಮಾಡುವ ಬದಲು ಉದ್ಯೋಗ ನೀತಿಯನ್ನು ರೂಪಿಸಿ ಅದಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಕೆಲವರು ಒತ್ತಾಯಿಸಿದ್ದಾರೆ.
ಸಂಘಟಕರಿಗೆ ಕಿವಿಮಾತು: ಭಾನುವಾರ ಸಹ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಬರುವ ಸಾಧ್ಯತೆಗಳಿದ್ದು ಸಂಘಟಕರು ಉದ್ದಿಮೆದಾರರ ಜೊತೆ ಮಾತನಾಡಿ ಜಿಲ್ಲೆಯ ನಿರುದ್ಯೋಗಿ ಎಂಜಿನಿಯರ್ಗಳಿಗೆ, ಉನ್ನತ ಶಿಕ್ಷಣ ಪಡೆದವರಿಗೆ ಸೂಕ್ತ ಅವಕಾಶ ಕಲ್ಪಿಸದಿದ್ದರೆ ಎರಡು ದಿನಗಳ ಉದ್ಯೋಗ ಮೇಳ ರಾಜಕೀಯ ಜಾತ್ರೆ ಎಂಬ ಅಪಕೀರ್ತಿ ಗಳಿಸುವುದರಲ್ಲಿ ಅನುಮಾನವಿಲ್ಲವೆಂದು ಬಹುತೇಕ ಯುವಕರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಉದ್ಯೋಗ ಮೇಳದ ಮೊದಲ ದಿನ ಸಂಘಟಕರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಕನಿಷ್ಠ ಐದಾರು ಸಾವಿರ ಜನರಿಗೆ ಕೆಲಸ ಸಿಕ್ಕರೆ ಮೇಳದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅನೇಕರು ತಮ್ಮ ಮನದಾಳದ ಮಾತು ತಿಳಿಸಿದ್ದಾರೆ.