ಮನೆ, ಮನೆಗೆ ಒಳಚರಂಡಿ ಸಂಪರ್ಕ: ರೇಣುಕಾ
ಮಾಲೂರು: ಪಟ್ಟಣದ ಪ್ರತಿ ಮನೆಗೂ ಒಳಚರಂಡಿ ಸಂಪರ್ಕ ನೀಡುವ ಕಾಮಗಾರಿ ಸೋಮವಾರದಿಂದ ಚಾಲನೆ ಗೊಳ್ಳಲಿದ್ದು, ಮನೆ ಮಾಲೀಕರು ಪುರಸಭೆ ನಿಗದಿ ಪಡಿಸಿರುವ ಹಣ ಕಟ್ಟಿ ಸಂಪರ್ಕ ವ್ಯವಸ್ಥೆ ಪಡೆಯಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ಹೇಳಿದರು.
ಅವರು ತಮ್ಮ ಕಚೇರಿಯಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿ, ಪಟ್ಟಣದ ಗಾಂಧಿ ವೃತ್ತದಿಂದ ಮನೆಗಳಿಗೆ ಒಳಚರಂಡಿ ಸಂಪರ್ಕ ನೀಡುವ ಕಾಮಗಾರಿ ಪ್ರಾರಂಭವಾಗಲಿದ್ದು, ಹಂತ ಹಂತವಾಗಿ ಪಟ್ಟಣದ ಎಲ್ಲ ವಾರ್ಡ್ಗಳಿಗೂ ವಿಸ್ತರಿಸಲಾಗುವುದು. ಒಂದು ರಸ್ತೆಯಲ್ಲಿ ಒಳ ಚರಂಡಿ ಸಂಪರ್ಕ ಕಾಮಗಾರಿ ಮುಗಿದ ತಕ್ಷಣ ಅ ರಸ್ತೆಯ ಡಾಂಬರೀಕರಣ ಮಾಡಲಾಗುವುದು ಎಂದರು.
ಮನೆ ಮಾಲೀಕರು 10 ಅಡಿ ರಸ್ತೆಯಲ್ಲಿನ 5 ಅಡಿ ಉದ್ದದ ಸಂಪರ್ಕಕ್ಕೆ 1500 ರು.ಗಳು,20 ಅಡಿ ರಸ್ತೆಯಲ್ಲಿನ 10 ಅಡಿ ಉದ್ದದ ಸಂಪರ್ಕಕ್ಕೆ 2000 ರು.ಗಳು ಹಾಗೂ 30 ಅಡಿ ರಸ್ತೆಯಲ್ಲಿನ 15 ಅಡಿ ಉದ್ದದ ಸಂಪರ್ಕಕ್ಕೆ 2500 ರು.ಗಳನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಅತಿ ಕಡಿಮೆ ವೆಚ್ಚದ ಈ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಂಪರ್ಕ ಮನೆಯ ಮುಂಭಾಗದ ಚರಂಡಿಯ ಅಂಚಿನವರೆಗೆ ಮಾಡಲಿದ್ದು, ಪಟ್ಟಣದಲ್ಲಿ ಒಳ ಚರಂಡಿ ಕಾಮಗಾರಿ ಪೂರ್ಣವಾದ ನಂತರ ಮನೆಯ ಸಂಪರ್ಕವನ್ನು ಈ ಸಂಪರ್ಕಕ್ಕೆ ಜೋಡಿಸಬೇಕೆಂದರು. ಒಳ ಚರಂಡಿ ಸಂಪರ್ಕ ಹಾಕಿಸಿಕೊಳ್ಳುವ ಮನೆ ಮಾಲೀಕರು ಪುರಸಭೆಯಲ್ಲಿ ನೀರಿನ ಅಥವಾ ಮನೆ ಕಂದಾಯದ ಬಾಕಿ ಉಳಿಸಿ ಕೊಂಡಿರಬಾರದು ಎಂದಿರುವ ಪುರಸಭೆ ಮುಖ್ಯಾಧಿಕಾರಿಗಳು ನೀರಿನ ಕರ,ಕಂದಾಯ ವಸೂಲಾತಿಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ವಾರ್ಡ್ ಸದಸ್ಯರು ಸಹಕರಿಸಲಿದ್ದಾರೆ ಎಂಬ ಭರವಸೆ ಇದೆ ಎಂದರು.ಸಾರ್ವಜನಿಕರು ಸಹ ನಿಗದಿತ ಸಮಯದಲ್ಲಿ ಕಂದಾಯವನ್ನು ಪಾವತಿ ಮಾಡಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಅಭಿಯಂತರ ಮಂಜುನಾಥ್ ಇದ್ದರು.