ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ
ಬಂಗಾರಪೇಟೆ: ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಸಂಚಾರ ನಿಯಮ ಹಾಗೂ ಕಾನೂನು ಪಾಲನೆಯನ್ನು ಮೈಗೂಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಅವರು ಕಾನೂನು ಉಲ್ಲಂಘನೆ ಮಾಡುವ ಸಂಭವ ಇರದು ಎಂದು ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಗೋವಿಂದರಾಜು ಹೇಳಿದರು. ಪಟ್ಟಣದ ಲಿಟಲ್ ಪ್ಲವರ್ ಶಾಲೆಯಲ್ಲಿ ಕೆಜಿಎಫ್ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾನೂನು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಪ್ರತಿ ಶಾಲೆಯಿಂದ 20 ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಜಾಗೃತಿ ಮೂಡಿಸಿ ಅದರ ಬಗ್ಗೆ ಅಗತ್ಯವಾಗಿ ಬೇಕಾಗಿರುವ ಪರಿಕರಗಳನ್ನು ಸಹ ಇಲಾಖೆಯಿಂದ ಕಲ್ಪಿಸಲಾಗುವುದು. ಪಟ್ಟಣದ ಶಾಲಾ ಮಕ್ಕಳಿಗೆ ಅಲ್ಲದೆ ಗ್ರಾಮೀಣ ಪ್ರದೇಶದ ಮಕ್ಕಳಿಗೂ ರಸ್ತೆ ಸುರಕ್ಷತೆ ಬಗ್ಗೆ ತಿಳಿವಳಿಕೆ ಉಂಟು ಮಾಡಿ ನಂತರ ಅವರಿಂದಲೇ ಸಾಮೂಹಿಕ ಪ್ರದರ್ಶನ ಮಾಡಿಸಲಾಗುವುದು ಎಂದು ಹೇಳಿ, ಈ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ಇಂತಹ ಅರಿವು ಮೂಡಿಸುವ ಚಟುವಟಿಕೆ ನಡೆಯುತ್ತಿರುವುದಕ್ಕೆ ಅಭಿನಂದಿಸಿದರು. ಶಾಲೆ ಅಧ್ಯಕ್ಷ ಕೃಷ್ಣಮೂರ್ತಿ, ಪೊಲೀಸ್ ಸಿಬ್ಬಂದಿ ದೇವರಾಜ್, ಚಿನ್ನಪ್ಪಯ್ಯ,ಅಶೋಕ್ , ಸೋಮಶೇಖರರೆಡ್ಡಿ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ಕಾರ್ಯದರ್ಶಿ ಅನಿತಾ ಮತ್ತಿತರರು ಇದ್ದರು.