ದ.ರಾ. ಬೇಂದ್ರೆ ಬದುಕು-ಬರಹ ಸಾಹಿತ್ಯಕೂಟ
ಚಿಂತಾಮಣಿ: ರಸವೆ ಜನನ, ವಿರಸ ಮರಣ, ಸಮರವೇ ಜೀವನ ಎಂದು ಸಾರಿದ ದ.ರಾ. ಬೇಂದ್ರೆ ಸಾಮಾಜಿಕ ಪ್ರಜ್ಞೆಯ ಪರಿಪೂರ್ಣ ಕವಿ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು. ಪಟ್ಟಣದ ಹಳೇ ಸಂತೆ ಮೈದಾನದಲ್ಲಿರುವ ಶಿಶುವಿಹಾರದ ಮಂದಿರದಲ್ಲಿ ದಿ.ವೈ.ಎಸ್. ಗುಂಡಪ್ಪನವರು ಸ್ಥಾಪಿಸಿರುವ ವ್ಯಾಸಾಂಗ ಗೋಷ್ಠಿಯಾದ ಸಾಹಿತ್ಯಕೂಟದಲ್ಲಿ 2,965 ನೇ ಶನಿವಾರದ ಕಾರ್ಯಕ್ರಮವಾಗಿ ದ.ರಾ. ಬೇಂದ್ರೆ ಬದುಕು-ಬರಹ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಸಿಕೊಟ್ಟರು. ದ.ರಾ. ಬೇಂದ್ರೆ ಅವರ ಜೀವನ ಯಾತ್ರೆ ಹಾಗೂ ಸಾಹಿತ್ಯ ಯಾತ್ರೆ ಎರಡೂ ಹೋರಾಟಮಯವಾಗಿತ್ತು. ಅವರ ಜೀವನಾನುಭವವನ್ನು ತಮ್ಮ ಕವಿತೆಗಳ ಮೂಲಕ ಹೊರಹೊಮ್ಮುತ್ತಾ ಕನ್ನಡ ಸಾಹಿತ್ಯದಲ್ಲಿ ಅಮರವಾದ ಸ್ಥಾನ ಪಡೆದಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಬಂದಾಗ ಆತ್ಮೀಯರು ಶುಭಾಶಯ ಹೇಳಲು ಬಂದಾಗ ಬೇಂದ್ರೆ ಮನೆಯ ಮುಂದೆ ಗೇಟ್ ಹತ್ತಿರ ಬಿಕ್ಷುಕನ ಬಳಿ ಮಾತನಾಡುತ್ತಿದ್ದರು. ತಿರುಕನಿಗೂ ತಿರುಗಾಡಿ ಅನುಭವವಿರುತ್ತದೆ. ಅವನ ಅನುಭವ ದೊಡ್ಡದು ಎಂದರಂತೆ ಬೇಂದ್ರೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕೈಪು ನಾಗಸುಬ್ರಮಣ್ಯಂ, ಕಾಗತಿ ವೆಂಕಟರತ್ನಂ, ರಾಯಲ್ ಶಿ.ಮ. ಮಂಜುನಾಥ್, ಪ್ರಸಾದ್, ರೆಡ್ಡೆಪ್ಪಚಾರಿ, ರಾಜೇಶ್, ಎಸ್.ಸಿ.ಶ್ರೀನಿವಾಸರೆಡ್ಡಿ, ಇದ್ದರು.