ವಿದ್ಯಾರ್ಥಿಗಳಿಗೆ ಸೌರ ದೀಪ ವಿತರಣೆ
ಶಿಡ್ಲಘಟ್ಟ: ಕುಂದಲಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮೆಂಡಾ ಪೌಂಡೇಶನ್ನಿಂದ ಸೌರ ದೀಪಗಳನ್ನು ವಿತರಿಸಲಾಯಿತು. ಮೆಂಡಾ ಪೌಂಡೇಶನ್, ಇನ್ಪೋಸಿಸ್, ರೋಟರಿ ಕ್ಲಬ್ ಕೋರ ಮಂಗಲದ ಸಹಯೋಗದೊಂದಿಗೆ ಸೌರ ದೀಪಗಳನ್ನು ವಿತರಿಸಿ ಮೆಂಡಾ ಪೌಂಡೇಶನ್ ಅಧ್ಯಕ್ಷ ಚತುರ್ ಮೆಂಡಾ ಮಾತನಾಡಿ, ಹಳ್ಳಿಗಳಲ್ಲಿ ವಿದ್ಯುತ್ ಅಬಾವವಿರುವುದರಿಂದ ಸೋಲಾರ್ ದೀಪಗಳನ್ನು ವಿತರಿಸುತ್ತಿದ್ದು, 5 ಸರ್ಕಾರಿ ಶಾಲೆಗಳಲ್ಲಿ 74 ಸೌರ ದೀಪಗಳನ್ನು ಹಂಚುತ್ತಿರುವುದಾಗಿ ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ರೋಸಲಿನ್ ಪರರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿತರಿಸಿರುವ ಸೋಲಾರ್ ದೀಪಗಳನ್ನು ಕಾಪಾಡಿಕೊಂಡು ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಬೇಕಾಗಿದೆ ಎಂದರು. ಮೆಂಡಾ ಫೌಂಡೇಶನ್ ಚತುರ್ ಮೆಂಡಾ, ಯೋಗಿಂದರ್ ಸಿಂಗ್, ಸಂಗಮೇಶ್, ಶ್ವೇತಾ ಅಗರ್ ವಾಲ್ ಇದ್ದರು.
ರಾಜ್ಯೋತ್ಸವ ಯಶಸ್ಸಿಗೆ ಸಹಕರಿಸಲು ಮನವಿ
ಚಿಂತಾಮಣಿ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಎಲ್ಲಾ ಕನ್ನಡಪರ ಸಂಘಟನೆಗಳು ಮುಂದಾಗಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎ.ಎಸ್.ನಾಗರಾಜ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಸೊಬಗನ್ನು ಬೀರಲು 26 ರ ಸಂಜೆ 6 ಗಂಟೆಗೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಿದ್ಯಾ ಗಣಪತಿ ರಂಗ ಮಂದಿರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಲಿಕಲ್ ನಟರಾಜ್ ಪವಾಡ ಬಯಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ನಗರಸಭೆ ಕಚೇರಿ ಹತ್ತಿರದ ರಾಮಚಂದ್ರಾರೆಡ್ಡಿ(ಸ್ವಾಮೀಜಿ)ಹೊಟೇಲ್ನಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಸಂಜೆ ಉಚಿತ ಕಾಫಿ ನೀಡಲು ತೀರ್ಮಾನಿಸಿರುವುದಾಗಿ ಸಭೆಯಲ್ಲಿ ಹೇಳಿದರು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತರಾವ್, ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ, ವಸಂತಕುಮಾರ್, ಡಿವೈಎಸ್ಪಿ ಸಣ್ಣತಿಮ್ಮಯ್ಯ, ಕೆ.ಜಿ. ರಂಗಯ್ಯ, ಚನ್ನೇಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಆರ್. ಅಶೋಕ್ ಕುಮಾರ್, ಗಂಗುಲಪ್ಪ,ಶ್ರೀನಿವಾಸ್, ವಿ. ಶ್ರೀನಿವಾಸರೆಡ್ಡಿ, ಮಂಜುನಾಥ್, ವೆಂಕಟರವಣಪ್ಪ, ಸಿ. ಮಂಜುನಾಥ್, ಶಂಕರ್ ಇದ್ದರು.
ವಿದ್ಯುತ್ ಶಾಕ್; ವ್ಯಕ್ತಿ ಸಾವು
ಶಿಡ್ಲಘಟ್ಟ: ಪಟ್ಟಣದ ಕಾಮಾಟಿಗರ ಪೇಟೆಯ ಪ್ರಕಾಶ್ ಎಂಬವರಿಗೆ ವಿದ್ಯುತ್ ಹೀಟರ್ ಶಾಕ್ ಹೊಡೆದು ಮೃತ ಪಟ್ಟಿದ್ದಾರೆ. ಸ್ನಾನ ಮಾಡಲು ಹೋದಾಗ ವಿದ್ಯುತ್ ಹೀಟರ್ ಸ್ಪರ್ಶವಾಗಿದ್ದು, ಅಸ್ವಸ್ಥರಾಗಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ಕರೆತರಲಾಯಿತಾದರೊ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.