ಸಾಧಕರಿಗೆ ಪ್ರಶಸ್ತಿ ಸಿಕ್ಕಾಗ ನಿಜವಾದ ಅರ್ಥ
ಗೌರಿಬಿದನೂರು: ನಿಸ್ವಾರ್ಥವಾಗಿ ಸಮಾಜಸೇವೆ ಮಾಡುವ ಸಾಧಕರಿಗೆ ಪ್ರಶಸ್ತಿ ಸಿಕ್ಕಾಗ ನಿಜವಾದ ಅರ್ಥ ಸಿಗುತ್ತದೆ ಎಂದು ಉಪಾಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ ಅಬಿಪ್ರಾಯಪಟ್ಟರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ನಾರಾಯಣಸ್ವಾಮಿ ಅವರಿಗೆ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದ ಕೆ.ನಾರಾಯಣಸ್ವಾಮಿಯವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಚಾರ ಇವರು ಶಿಕ್ಷಣ ಕ್ಷೇತ್ರದಲ್ಲಿ 33 ವರ್ಷ ಸೇವೆ ಸಲ್ಲಿಸಿ ನಿವೃತರಾಗಿ ನಂತರ ಪರಿಸರ ಮತ್ತು ಜಲಪ್ರಜ್ಞೆ ಮೂಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಸಾಹಿತಿ ಪಿಚ್ಚಳ್ಳಿ ಶ್ರೀನಿವಾಸ್, ಗೊಲ್ಲಹಳ್ಳಿ ಶಿವಪ್ರಸಾದ್, ವೃತ್ತ ನಿರೀಕ್ಷಕ ಕೆ. ನಾಗರಾಜು, ದಲಿತ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ಕಲಾವಿದ ರಾಮಕೃಷ್ಣ ದಲಿತ ಮುಖಂಡರಾದ ಸಿ.ಜಿ. ಗಂಗಪ್ಪ, ಮಾಕರಾಮಚಂದ್ರ, ವಕೀಲ ವಿ.ಸಿ. ಗಂಗಯ್ಯ, ಲಕ್ಷ್ಮೀನಾರಾಯಣ, ಪಿ. ನರಸಿಂಹಮೂರ್ತಿ, ಜಿ. ಸೋಮಯ್ಯ, ಜಿ. ಬಾಲಪ್ಪ ಇದ್ದರು.
ಬೆಳಗಾವಿ ಅಧಿವೇಶನಕ್ಕೆ ರೈತರ ಅಡ್ಡಿ
ಬಂಗಾರಪೇಟೆ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಸೋಮವಾರ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ವಿಧಾನಸೌದ ಮುಂದೆ ಪ್ರತಿಭಟನೆ ಮಾಡುವುದಾಗಿ ರೈತ ಸಂಘದ ಅಧ್ಯಕ್ಷ ಮರಗಲ್ ಉದಯ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಎತ್ತಿನ ಹೊಳೆ ಯೋಜನೆ ಜೊತೆಗೆ ಡಾ. ಪರಮಶಿವಯ್ಯ ವರದಿಯನ್ನೂ ಜಾರಿಗೆ ತರಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಈ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ಕೆ ಎಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ರೈತ ಮುಖಂಡ ಮುನೇಗೌಡ ಕೋರಿದ್ದಾರೆ.