ಸಾಮಾಜಿಕ ಕಾರ್ಯಗಳತ್ತ ಕನ್ನಡ ಸಂಘಟನೆಗಳು
ಮಾಲೂರು: ರಕ್ತದಾನ ದಂತಹ ಸಾಮಾಜಿಕ ಕಾರ್ಯಮಾಡುವ ಕಡೆ ಕನ್ನಡ ಪರ ಸಂಘಟನೆಗಳು ಕಾರ್ಯೋನ್ಮೂಕ ವಾಗಿರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅರ್ರಿದಾ ಮಂಜುನಾಥ್ ಗೌಡ ಹೇಳಿದರು.
ಪಟ್ಟಣದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರದಲ್ಲಿ ಆಯೋಜಿಸಿಗಿದ್ದ ಜೈ ಕರ್ನಾಟಕ ವೇದಿಕೆಯ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ನೆಡೆದ ರಕ್ತ ಹಾಗೂ ನೇತ್ರದಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ-ನುಡಿಗಾಗಿ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತಿರುವ ಕನ್ನಡ ಪರ ಸಂಘಟನೆಗಳು ಪ್ರಾಣಪಾಯದಲ್ಲಿರುವ ಕನ್ನಡಿಗರ ಪ್ರಾಣ ಉಳಿಸುವಂತಹ ರಕ್ತ ಹಾಗೂ ನೇತ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯಾಧಿಕಾರಿ ರೇಣುಕಾ ಮಾತನಾಡಿ, ಒಂದು ಬಾಟಲು ರಕ್ತದಿಂದ ಇಬ್ಬರ ಪ್ರಾಣ ಉಳಿಸಬಹುದಾಗಿದ್ದು, ಆರೋಗ್ಯವಂತರಾಗಿರುವ ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದರು. ಸಂಘಟನೆ ತಾಲೂಕು ಅಧ್ಯಕ್ಷ ಟಿ.ಆರ್. ನಾರಾಯಣಗೌಡ, ಕಾರ್ಯಧ್ಯಕ್ಷ ವಿ. ಶ್ರೀನಿವಾಸ್, ಧನರಾಜ್, ಶಂಕರ್ ಸಿಂಗ್, ಸುರೇಶ್‌ಕುಮಾರ್, ಮುನಿರಾಜು, ಅನಿಲ್‌ಕುಮಾರ್, ವಾಸು, ಕೆ. ಆಶೋಕ್, ಶ್ರೀನಿವಾಸ್, ಲಕ್ಷ್ಮಣ್ ಇದ್ದರು.
ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರದ ನರೆವಿನೊಂದಿಗೆ ನಡೆದ ನೇತ್ರದಾನದಲ್ಲಿ 64 ಮಂದಿ ತಮ್ಮ ಹೆಸರು ನೋಂದಾಯಿಸಿದ್ದು, ರಕ್ತದಾನದಲ್ಲಿ 55 ಬಾಟಲು ರಕ್ತ ಸಂಗ್ರಹಿಸಲಾಯಿತು. ಸಂಘದ ಉದ್ಘಾಟನೆ ಅಂಗವಾಗಿ ಪಟ್ಟಣದ ಹಳೇ ಕೋರ್ಟ್ ಹಿಂಭಾಗ ಮೈದಾನದಲ್ಲಿ ಶಾಲಾ ವಿದ್ಯಾರ್ಥಿನಿಯರಿಗಾಗಿ ರಂಗೋಲಿ ಸ್ಪರ್ದೆ ಏರ್ಪಡಿಸಲಾಗಿತ್ತು. ಮಾಧ್ಯಮಿಕ ಮತ್ತು ಪ್ರೌಡಶಾಲೆ ಮಕ್ಕಳಿಗಾಗಿ ಚಿತ್ರಕಲಾ ಸ್ವರ್ಧೆ ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಾಡಗೀತೆ, ಜನಪದ ಗೀತೆ ಹಾಗೂ ಸಮೂಹ ನೃತ್ಯದ ಸ್ಪರ್ಧೆ ಏರ್ಪಡಿಸಲಾಗಿತ್ತು.