ಅತಿಥಿ ಉಪನ್ಯಾಸಕರಿಂದ ಸರ್ಕಾರಕ್ಕೆ ಮನವಿ
ಚಿಕ್ಕಬಳ್ಳಾಪುರ: ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷೆ ಹೇಮಲತಾ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 10,562ಕ್ಕಿಂತ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು ಯುಜಿಸಿಯ ನಿಯಮದಂತೆ ಮಾಸಿಕ ವೇತನ 25 ಸಾವಿರ ನಿಗದಿಪಡಿಸುವುದರ ಜತೆಗೆ ಸೇವಾ ಭದ್ರತೆ ಕಾಯಂಗೊಳಿಸಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ಸಮಯದಲ್ಲಿ ವೇತನದ ಜೊತೆಗೆ 5 ತಿಂಗಳ ರಜೆ ನೀಡಬೇಕು, ಅನುದಾನಿತ ಕಾಲೇಜುಗಳಿಂದ ಖಾಯಂ ಉಪನ್ಯಾಸಕರನ್ನು ಅತಿಥಿ ಉನ್ಯಾಸಕರ ಜಾಗಕ್ಕೆ ನೇಮಕ ಮಾಡಿಕೊಂಡು ಅತಿಥಿ ಉಪನ್ಯಾಸಕರನ್ನು ಏಕಾಏಕಿ ಬೀದಿಗೆ ತಳ್ಳುವುದುನ್ನು ತಡೆಗಟ್ಟಬೇಕೆನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿಕೊಂಡು ಬರಲಾಗುತ್ತಿದೆಯಾದರೂ ಸಹ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ನ.27ರಂದು ರಾಜ್ಯ ಸರ್ಕಾರಕ್ಕೆ ಮತ್ತೆ ಮನವಿ ಪತ್ರವನ್ನು ಕೊಡುತ್ತೇವೆ. ಒಂದು ವೇಳೆ ಸ್ಪಂದಿಸದಿದ್ದರೆ ಮುಂದಿನ ಜ.21ರಿಂದ ಎಲ್ಲಾ ಸರ್ಕಾರಿ ಕಾಲೇಜುಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ಶಿವಪ್ಪ, ಉಪಾಧ್ಯಕ್ಷರಾಗಿ ಗೀತಾ, ಕಾರ್ಯದರ್ಶಿ ಸಿ.ಎಂ. ರಮೇಶ್, ಸದಸ್ಯ ಅಶ್ವತ್ಥಪ್ಪ ಉಪಸ್ಥಿತರಿದ್ದರು.