ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಡಾನೆ ಉಪಟಳ; ರೈತರ ಕಳವಳ

Srinivasa Murthy VN
Updated On : 26 Nov 2013, 1:34 am

ಬಂಗಾರಪೇಟೆ: ಒಂದು ವಾರದಿಂದ ಕಾಡಾನೆಗಳ ಉಪಟಳ ಮಿತಿ ಮೀರಿದ್ದು ಇದರ ಪರಿಣಾಮ ಕೊಯ್ಲಿಗೆ ಬಂದಿರುವ ರೈತರ ತೋಟಗಾರಿಕೆ ಬೆಳೆಗಳು ಆಹುತಿಯಾಗುತ್ತಿದ್ದರೂ ಅರಣ್ಯ ಇಲಾಖೆ ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಇರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೂರ್ನಾಲ್ಕು ದಿನಗಳಿಂದ ತೊಪ್ಪನಹಳ್ಳಿ, ಗಾಳಮ್ಮನಗುಡಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದ್ದು ಕೈಗೆ ಸಿಕ್ಕ ಬೆಳೆಗಳನ್ನು ತೀವ್ರವಾಗಿ ನಾಶ ಮಾಡುತ್ತಲೇ ಇವೆ. ಅವುಗಳನ್ನು ತಡೆಯಲು ಯಾವೊಬ್ಬ ರೈತರು ಮುಂದಾಗುತ್ತಿಲ್ಲ. ಈ ಹಿಂದೆ ತಡೆಯಲು ಹೋಗಿ 5ಮುಗ್ದ ಜೀವಗಳನ್ನು ಕಳೆದುಕೊಂಡಿರುವ ಘಟನೆ ಎಲ್ಲರ ಮನಸಿನಲ್ಲಿ ಇನ್ನೂ ಹಸಿರಾಗೇ ಇರುವಾಗ ಮತ್ತೆ ಆನೆಗಳನ್ನು ಕೆಣಕಿ ಸಾವನ್ನು ಆಹ್ವಾನಿಸಲು ಯಾರಿಗೂ ದೈರ್ಯವಿಲ್ಲ. ಕಳೆದ ರಾತ್ರಿ ಚಿಕ್ಕಕಳವಂಚಿ ಗ್ರಾಮಸ್ಥರು ಬೆಳೆದಿದ್ದ ರಾಗಿ, ಟೋಮೆಟೋ, ಬಾಳೆ ತೋಟಗಳಿಗೆ ಗಜಪಡೆ ಸೈನ್ಯ ನುಗ್ಗಿ ಮನಸೋಯಿಚ್ಚೆ ಹಾಳು ಮಾಡಿದೆ. ಇದರಿಂದ ಬೆವರು ಸುರಿಸಿ ಸಾಲ ಮಾಡಿ ಮಾಡಿದ್ದ ಬೆಳೆ ಆನೆಗಳ ರೂಪದಲ್ಲಿ ನಾಶವಾಗಿರುವುದು ರೈತರನ್ನು ಮತ್ತಷ್ಟು ಆರ್ಥಿಕವಾಗಿ ಕುಗ್ಗುವಂತಾಗಿದೆ.
ಅರಣ್ಯ ಇಲಾಖೆ ಬರೀ ಮಾತಿನಲ್ಲಿ ಮಾತ್ರ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ಹೇಳುತ್ತಿದ್ದಾರೆ. ಆದರೆ ಇದುವರೆಗೂ ಅವುಗಳನ್ನು ಗಡಿ ದಾಟಿಸುವ ಬದಲು ಒಳಗೆ ಸೇರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆಂದು ರೈತರ ಆರೋಪವಾಗಿದೆ. ಇಲಾಖೆ ಸಿಬ್ಬಂದಿ ಆನೆಗಳನ್ನು ಈಗ ಆಂಧ್ರಪ್ರದೇಶದ ಕಡೆ ಈಗ ಓಡಿಸುವುದು ಅನಿವಾರ್ಯವಾಗಿದೆ. ಆಂಧ್ರ ಗಡಿಯಲ್ಲಿ ಆನೆಗಳ ಹಿಂಡು ಇರುವುದರಿಂದ ಗುಡಿಪಲ್ಲಿ ಕಡೆ ಹೋಗುವಂತೆ ಮಾಡಬೇಕು. ಆದರೆ ಆಂಧ್ರಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಆನೆಗಳು ಬಂದರೆ ಮತ್ತೆ ರಾಜ್ಯದತ್ತ ವಾಪಸ್ ಕಳುಹಿಸಲು ಸಜ್ಜಾಗಿರುವುದರಿಂದ ರೈತರಿಗೆ ಕಾಟ ತಪ್ಪಿದ್ದಲ್ಲ. ಭಾನುವಾರ ರಾತ್ರಿ ಚಿಕ್ಕಕಳವಂಚಿ ಗ್ರಾಮದ ಗಂಗಲಪ್ಪ ಮತ್ತು ಶೀನಪ್ಪ ಎಂಬುವರ ಬಾಳೆ ತೋಟ, ನಾರಾಯಣಪ್ಪ ಹಾಗೂ ಬಾಲಕೃಷ್ಣ ಎಂಬುವರ ಟಮೇಟೋ ಬೆಳೆ ಚಿನ್ನಕಾಮನಹಳ್ಳಿ ಗ್ರಾಮದ ಇಶ್ರತ್ ಮತ್ತು ಶಹದ್ ಎಂಬುವವರ ಭತ್ತದ ಗದ್ದೆಗಳಿಗೆ ಗಜ ಪಡೆ ಸೈನ್ಯ ದಾಳಿ ಮಾಡಿ ಸುಮಾರು 5 ಲಕ್ಷ ದಷ್ಟು ಬೆಳೆಯನ್ನು ಮಣ್ಣು ಪಾಲಾಗುವಂತೆ ಮಾಡಿದೆ. ಆನೆಗಳಿಂದ ರೈತರಿಗೆ ಹಾನಿಯಾಗುತ್ತಿದ್ದರೂ ಅರಣ್ಯ ಇಲಾಖೆ ನಷ್ಟ ಪರಿಹಾರ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಕನಿಷ್ಠ ಪಕ್ಷ ನಷ್ಟದ ಅಂದಾಜು ಸಹ ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement