ಕಾಲುಬಾಯಿ ಜ್ವರ; ಪರಿಹಾರ ಬಿಡುಗಡೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ ಕಾಲುಬಾಯಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದ ರಾಸುಗಳಿಗೆ ರಾಜ್ಯ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಿದೆ.
ಕಾಲುಬಾಯಿ ಜ್ವರ ಮತ್ತು ಗಂಟಲು ಬೇನೆ ರೋಗದಿಂದ ಮರಣ ಹೊಂದಿದ ಜಾನುವಾರುಗಳಿಗೆ ಪ್ರತಿ ಹಸುವಿಗೆ ತಲಾ ರು. 25,000 ಮತ್ತು ವಯಸ್ಕ ಎತ್ತು ಕೋಣಗಳಿಗೆ ತಲಾ ರು. 20,000 ಹಾಗೂ ಕರುಗಳಿಗೆ ತಲಾ 10,000 ರು.ಗಳಂತೆ ಪರಿಹಾರ ನೀಡಲಾಗುತ್ತಿದೆ.
ಕಳೆದ ಆಗಸ್ಟ್ 1 ರಿಂದ ಅ.31 ರವರೆಗೆ ಕಾಲುಬಾಯಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದ 475 ರಾಸುಗಳಿಗೆ ಮಾತ್ರ ಪರಿಹಾರ ಬಿಡುಗಡೆ ಮಾಡಿದ್ದು ಚಿಕ್ಕಬಳ್ಳಾಪುರದಲ್ಲಿ 38 ರಾಸುಗಳಿಗೆ ರು. 6,85,000, ಗೌರಿಬಿದನೂರಿನಲ್ಲಿ 132 ರಾಸುಗಳಿಗೆ ರು. 3,04,0000, ಬಾಗೇಪಲ್ಲಿಯಲ್ಲಿ 90 ರಾಸುಗಳಿಗೆ ರು. 2,07,0000, ಗುಡಿಬಂಡೆ 69 ರಾಸುಗಳಿಗೆ ರು. 1,67,5000, ಶಿಡ್ಲಘಟ್ಟ 150 ರಾಸುಗಳಿಗೆ ರು. 2,89,5000 ಬಿಡುಗಡೆಯಾಗಿದೆ.
ಆದರೆ, ಚಿಂತಾಮಣಿ ತಾಲೂಕಿನ ವ್ಯಾಪ್ತಿಯಲ್ಲಿ ಮೃತಪಟ್ಟಂತಹ ರಾಸುಗಳಿಗೆ ಇನ್ನೂ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಚಿಂತಾಮಣಿ ತಾಲ್ಲೂಕಿನಲ್ಲಿ ಮರಣ ಹೊಂದಿರುವ ರಾಸುಗಳ ವಿವರ ಸರ್ಕಾರಕ್ಕೆ ಸಲ್ಲಿಸಿದ್ದು ಸಧ್ಯದಲ್ಲಿಯೇ ಹಣ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಪ್ರಸ್ತುತ ಜಾನುವಾರು ಮರಣ ಹೊಂದಿದ ರಾಸುಗಳ ಮಾಲೀಕರಿಗೆ ಆಯಾ ತಾಲೂಕಿನ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಪರಿಹಾರದ ಹಣವನ್ನು ಚೆಕ್ ಮೂಲಕ ವಿತರಿಸಲಿದ್ದು ರೈತರು ಪರಿಹಾರದ ಹಣವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.