ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾರ; ಕನ್ನಡ ಶಾಲೆಗಳಿಗಿಲ್ಲ ದರಕಾರ್!

Srinivasa Murthy VN
Updated On : 25 Nov 2013, 11:57 am

-ಪಾ.ಶ್ರೀ. ಅನಂತರಾಮ್
ಕ.ಪ್ರ. ವಾರ್ತೆ ಕೋಲಾರ ನ. 25
ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೊಂದಿಕೊಂಡು ತ್ರಿಭಾಷಾ ಸಂಗಮವಾಗಿರುವ ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಭಾಷೆಯಾಗಿ ಕನ್ನಡ ಉಳಿದಿದೆಯೇ ಹೊರತು ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡ ಎಕ್ಕಡ, ಎನ್ನಡ ಪರಿಸ್ಥಿತಿ ಇದೆ. ಕನ್ನಡ ಶಾಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಇದಕ್ಕೆ ಕೇವಲ ಸರ್ಕಾರದ ನೀತಿಗಳು ಮಾತ್ರ ಕಾರಣವಲ್ಲ. ಇಂಗ್ಲಿಷ್ ಕಲಿಯಬೇಕೆಂಬ ಬಯಕೆಯಿಂದ ಬಡತನವಿದ್ದರೂ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೇ ಕಳುಹಿಸುತ್ತಿರುವುದರಿಂದ ಸರ್ಕಾರಿ ಕನ್ನಡ ಶಾಲೆಗಳು ಮಕ್ಕಳಿಲ್ಲದೆ ಸೊರಗುತ್ತಿವೆ. ಹಿಂದುಳಿದ ಮತ್ತು ಗಡಿ ಜಿಲ್ಲೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಡಾ. ನಂಜುಂಡಪ್ಪ ವರದಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಶಿಫಾರಸುಗಳನ್ನು ಆಧರಿಸಿ, ಕೋಲಾರ ಜಿಲ್ಲೆಯ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ, ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದರೂ ಮಕ್ಕಳನ್ನು ಆಕರ್ಷಿಸುವಲ್ಲಿ ಸರ್ಕಾರಿ ಕನ್ನಡ ಶಾಲೆಗಳು ವಿಫಲವಾಗಿವೆ.

ಶಾಲೆಗಳು ಮುಚ್ಚುವ ಭೀತಿಯಲ್ಲಿದ್ದವು
ಜಿಲ್ಲೆಯಲ್ಲಿ ಸುಮಾರು 1,695 ಸರ್ಕಾರಿ ಕನ್ನಡ ಶಾಲೆಗಳಿವೆ. ಈ ಪೈಕಿ ಶೇ.60 ಶಾಲೆಗಳಲ್ಲಿ ಮಾತ್ರ ವಿದ್ಯಾರ್ಥಿಗಳ ಸಂಖ್ಯೆ ತೃಪ್ತಿದಾಯಕವಾಗಿದ್ದರೆ ಇನ್ನುಳಿದ ಶಾಲೆಗಳಲ್ಲಿ ಶೇ.60ಕ್ಕಿಂತ ಕಡಿಮೆ ಇದೆ. ಐದು ಮಕ್ಕಳಿಗಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಸರ್ಕಾರ ಎರಡು ವರ್ಷಗಳ ಹಿಂದೆ ಮುಚ್ಚಲು ಆದೇಶಿಸಿದಾಗ ಸುಮಾರು 80ಕ್ಕೂ ಹೆಚ್ಚು ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ನಿರ್ಧರಿಸಲಾಗಿತ್ತು. ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಅಲ್ಲಗೇ ಕೈ ಬಿಡಲಾಯಿತು. ಬದಲಾಗಿ ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಲಾಯಿತು. ಕನ್ನಡ ಶಾಲೆಗಳು ಅಸ್ತಿತ್ವ ಕಳೆದುಕೊಳ್ಳಲು ಇದೂ ಒಂದು ಕಾರಣ. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರೂ ಇಂಗ್ಲಿಷ್ ವ್ಯಾಮೋಹದೊಂದಿಗೆ ಸಾರಿಗೆ ಸೌಲಭ್ಯದ ಕೊರತೆಯೂ ಮಕ್ಕಳನ್ನು ಸರ್ಕಾರಿ ಶಾಲೆಯೆಡೆಗೆ ಆಕರ್ಷಿಸುವಲ್ಲಿ ವಿಫಲವಾಗುತ್ತಿವೆ.  

758 ಮಕ್ಕಳು ಶಾಲೆಯಿಂದ ಹೊರಕ್ಕೆ
ಕಳೆದ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ 758 ಮಕ್ಕಳು ಸರ್ಕಾರಿ ಶಾಲೆಯನ್ನು ತೊರೆದಿದ್ದಾರೆ. ಈ ಪೈಕಿ ಮಾಲೂರು ತಾಲೂಕಿನ ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಕೂಲಿ ಕಾರ್ಮಿಕರ ಮಕ್ಕಳೂ ಸೇರಿದ್ದಾರೆ. ಅನೇಕ ಶಾಲೆಗಳಲ್ಲಿ ಉತ್ತಮ ಮೂಲ ಸೌಕರ್ಯಗಳಿದ್ದರೂ ಗಣಿತ, ವಿಜ್ಞಾನ, ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುವ ದಕ್ಷ ಹಾಗೂ ಪರಿಣತ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಇದರಿಂದಲೂ ಕನ್ನಡ ಶಾಲೆಗಳಿಗೆ ಮಕ್ಕಳು ಸೇರಲು ಹಿಂದೇಟು ಹಾಕುತ್ತಿದ್ದಾರೆ. ಅನೇಕ ಕಡೆ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯೊಂದಿಗೆ ಶಾಮೀಲಾಗಿ ಹಳ್ಳಿ ಮಕ್ಕಳೂ ಕಾನ್ವೆಂಟ್‌ಗಳಿಗೆ ದಾಖಲಾಗುವಂತೆ ಎಚ್ಚರ ವಹಿಸುತ್ತಿದ್ದಾರೆ.

ಶತಮಾನ ಕಂಡ ಶಾಲೆಗಳು
ಜಿಲ್ಲೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಶತಮಾನ ಕಂಡ ಸರ್ಕಾರಿ ಕನ್ನಡ ಶಾಲೆಗಳು ಇದ್ದರೂ ಶಿಕ್ಷಣ ಇಲಾಖೆಯಿಂದ ಈ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳು ರೂಪಿತವಾಗಿಲ್ಲ. ನೆನಪು ಉಳಿಯುವ ಯೋಜನೆಗಳೂ ಜಾರಿಗೊಂಡಿಲ್ಲ, ಶಾಲೆಯ ಇತಿಹಾಸ, ಸಾಧನೆಯ ಬಗ್ಗೆ ಶಾಲೆಗಳಲ್ಲಿ ಸರಿಯಾದ ದಾಖಲೆಗಳನ್ನೇ ಇಟ್ಟಿಲ್ಲ. ಇನ್ನು ಜಿಲ್ಲೆಯ ಹೆಮ್ಮೆಯ ಪುತ್ರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಓದಿದ ಮಾಲೂರು ತಾಲೂಕಿನ ದೊಡ್ಡ ಶಿವಾರಪಟ್ಟಣದ ಸರ್ಕಾರಿ ಕನ್ನಡ ಶಾಲೆ, ಡಿವಿಜಿಯವರು ಓದಿದ ಮುಳಬಾಗಲು ಸರ್ಕಾರಿ ಮಾದರಿ ಶಾಲೆ, ಮಾಜಿ ಸಚಿವ ದಿ. ಸಿ. ಬೈರೇಗೌಡರು ಓದಿದ ವೇಮಗಲ್ ಶಾಲೆ, ಹೈನುಗಾರಿಕೆಯ ಪೀತಾಮಹ, ಕೇಂದ್ರ ಮಾಜಿ ಸಚಿವ ದಿ.ಎಂ.ವಿ. ಕೃಷ್ಣಪ್ಪ ಮತ್ತು ಮಾಜಿ ಸ್ಪೀಕರ್ ದಿ. ಎಂ.ವಿ. ವೆಂಕಟಪ್ಪನವರ ತವರೂರಾದ ಮೋತಕಪಲ್ಲಿಯ ಸರ್ಕಾರಿ ಶಾಲೆ, ಕೃಷಿ ಮಾಜಿ ಸಚಿವ ಜಿ. ನಾರಾಯಣಗೌಡ, ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕ ರಮೇಶ್ ಕುಮಾರ್, ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಗೋಪಾಲಕೃಷ್ಣೇಗೌಡ ಅವರು ಓದಿರುವ ಶ್ರೀನಿವಾಸಪುರ ತಾಲೂಕಿನ ಸರ್ಕಾರಿ ಕನ್ನಡ ಶಾಲೆಗಳು ಕಾಲಕ್ಕೆ ತಕ್ಕಂತೆ ಮೇಲ್ದರ್ಜೆಗೆ ಏರಿದ್ದರೂ ಶೈಕ್ಷಣಿಕ ಗುಣಮಟ್ಟದಲ್ಲಿ ಪ್ರಗತಿ ಕಂಡಿಲ್ಲ.

ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ
ಕೋಲಾರ ಜಿಲ್ಲೆಯಲ್ಲಿ ಕನ್ನಡ ಶಾಲೆಗಳನ್ನು ಉಳಿಸಬೇಕೆಂದು ಭಾಷಣ ಬಿಗಿಯುವ ಜನಪ್ರತಿನಿಧಿಗಳು ಶಿಕ್ಷಕರ ಕೊರತೆ ನಿವಾರಣೆಗಾಗಿ ಗಟ್ಟಿದನಿಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತಿಲ್ಲ. ಖಾಸಗಿ ಶಾಲೆಗಳಿಗೆ ಅನುಮತಿ ಕಲ್ಪಿಸಲು ಇವರೇ ಮುಂದಾಗುತ್ತಾರೆ. ತ್ರಿಭಾಷಾ ಸಂಗಮವಾಗಿರುವ ಕೋಲಾರ ಜಿಲ್ಲೆಯಲ್ಲಿ ಕನ್ನಡದ ಅಸ್ವಿತ್ವ ಉಳಿವಿಗಾಗಿ ಜನತೆಯ ಪಾತ್ರದೊಂದಿಗೆ ಸರ್ಕಾರ ಕನ್ನಡ ಶಾಲೆಗಳಲ್ಲೇ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಬೇಕಾದ ವ್ಯವಸ್ಥೆ ಮಾಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement