ದಿಕ್ಕು ತಪ್ಪಿಸುವ ತಪ್ಪು ಮಾರ್ಗಸೂಚಿ
-ಎನ್. ಬಾಬು
ಚಿಂತಾಮಣಿ: ರಸ್ತೆ ಮಾರ್ಗದ ದಿಕ್ಸೂಚಿ ನಾಮಫಲಕ ಅದಲು ಬದಲುನಿಂದಾಗಿ ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ಬೈಪಾಸ್‌ನಿಂದ ಹೊಸಕೋಟೆಯವರೆಗೂ ಕೆಶಿಪ್-2 ಯೋಜನೆಯಡಿ ಸುಮಾರು 52 ಕಿ.ಮೀ. ಗಳ ರಸ್ತೆ ಕಾಮಗಾರಿಯನ್ನು ರು. 120 ಕೋಟಿ ವೆಚ್ಚದಲ್ಲಿ ಬರದಿಂದ ಸಾಗುತ್ತಿದೆ. ಆದರೆ ಅಧಿಕಾರಿಗಳ ಹಾಗೂ ಗುತ್ತಿಗೆದಾರನ ನಿರ್ಲಕ್ಷದಿಂದ ಮಾರ್ಗದ ದಿಕ್ಸೂಚಿ ನಾಮಫಲಕದಲ್ಲಿ ಚಿಂತಾಮಣಿ ಮಾರ್ಗವನ್ನು ಮದನಪಲ್ಲಿ ಮಾರ್ಗ ಎಂದು, ಮದನಪಲ್ಲಿ ಮಾರ್ಗವನ್ನು ಚಿಂತಾಮಣಿ ಎಂದು ಅದಲು-ಬದಲು ಮಾಡಿ ಪ್ರಯಾಣಿಕರಿಗೆ ದಿಕ್ಕು ತಪ್ಪುವಂತೆ ಆಗಿದೆಯೆಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಚಿಂತಾಮಣಿಗೆ ಪರಸ್ಥಳದಿಂದ ಬರುವ ಜನಸಾಮಾನ್ಯರು ಈ ನಾಮಫಲಕದ ಯಡವಟ್ಟಿನಿಂದ ಹಲವಾರು ಕಿ.ಮೀ. ದೂರ ಸಾಗಿ ಬಂದ ದಾರಿಗೆ ಹಿಂತಿರುಗಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರನಿಗೆ ಶಾಪ ಹಿಡುತ್ತಿದ್ದಾರೆ.
ಮಾಜಿ ಶಾಸಕ ಸುಧಾಕರ್ ಅವರ ಮುಂದಾಲೋಚನೆ ಫಲವಾಗಿ ಅಚ್ಚುಕಟ್ಟಾಗಿ ನಿರ್ಮಾಣಗೊಂಡ ರಸ್ತೆ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಸರಕು ಸಾಗಾಣಿಕೆಯ ಅಂತಾರಾಜ್ಯದ ವಾಹನಗಳಿಗೂ ಇದರ ಬಿಸಿ ಮುಟ್ಟಿದೆ. ಇದೇ ಮಾರ್ಗವಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸಂಚರಿಸುತ್ತಿದ್ದರೂ ಇತ್ತ ಗಮನ ಹರಿಸುತ್ತಿಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರನು ಎತ್ತೆಚ್ಚುಕೊಂಡು ತಕ್ಷಣ ನಾಮಫಲಕ ಸರಿಪಡಿಸಿಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.