ಮನೆಗೊಂದು ಶೌಚಾಲಯ; ಜನ ಜಾಗೃತಿ
ಶಿಡ್ಲಘಟ್ಟ: ಗ್ರಾಮೀಣ ಪ್ರದೇಶಗಳಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಗ್ರಾಮಗಳ ನೈರ್ಮಲ್ಯ ಕಾಪಾಡಬೇಕು ಎಂದು ಜಿಪಂ ಸದಸ್ಯ ಕಂಬದಹಳ್ಳಿ ಸತೀಶ್ ಕಿವಿಮಾತು ಹೇಳಿದರು.
ತಾಲೂಕಿನ ಮಳ್ಳೂರು ಗ್ರಾಮ ಪಂಚಾಯ್ತಿಯಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಲು ಜಾಗೃತಿ ಮೂಡಿಸುವ 2ನೇ ತಂಡ ತಲಹದಿ ಸರ್ವೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಳ್ಳೂರು ಮತ್ತು ಮುತ್ತೂರು ದಲಿತ ಕಾಲೋನಿಗಳಲ್ಲಿ ವಾಸಮಾಡಲು ಸರಿಯಾದ ಮನೆಗಳು ಇಲ್ಲದೇ ಕೆಲವರು ಕೇವಲ ಪ್ಲಾಸ್ಟಿಕ್ ಪೇಪರ್‌ಗಳನ್ನು ಅಡ್ಡಲಾಗಿ ಕಟ್ಟಿಕೊಂಡು ವಾಸಿಸುತ್ತಿದ್ದು,
ಮತ್ತೆ ಕೆಲವರು ಶಿಥಿಲ ವ್ಯವಸ್ಥೆಯಲ್ಲಿ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸ್ಥಳಾವಕಾಶ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 'ಗುಂಪು ಶೌಚಾಲಯ' ಗಳನ್ನು ನಿರ್ಮಿಸಲು ಈಗಾಗಲೇ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ಮಳ್ಳೂರಿಗೆ 4 ಹಾಗೂ ಮುತ್ತೂರಿನಲ್ಲಿ 2 ಗುಂಪು ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪ್ರಾಮಾಣಿಕ ಪ್ರಯತ್ನ: ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ ಮಾತನಾಡಿ,ಮಳ್ಳೂರು ಎಸ್.ಸಿ. ಕಾಲೋನಿಯಲ್ಲಿ ವಾಸ ಮಾಡಲು ಯೋಗ್ಯವಿಲ್ಲದ ಮನೆಗಳ ಪರಿಶೀಲನೆ ನಡೆಸಿದ್ದು, ಅರ್ಜಿಗಳನ್ನು ವಸತಿ ಇಲಾಖೆಗೆ ಕಳುಹಿಸಿ ಪುನರ್ ವಸತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಎರಡನೇ ತಂಡದ ಎಇಇ ಗಣಪತಿ ಸಾಕ್ರೇ ಮಾತನಾಡಿ, ಕೇಂದ್ರ ಸರಕಾರ ನಿರ್ಮಲಲ್ಭಾರತ ಅಭಿಯಾನದ ಅಡಿಯಲ್ಲಿ 4700 ಹಾಗೂ ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 4500 ಮತ್ತು ಫಲಾನುಭವಿಗಳು 800 ಸೇರಿ ಒಟ್ಟು 10 ಸಾವಿರ ರೂಗಳಲ್ಲಿ ಒಂದು ಶೌಚಾಲಯ ಕಟ್ಟುವಂತಹ ನಕಾಶೆ ಮತ್ತು ಅಂದಾಜು ಪಟ್ಟಿ ತಯಾರಿಸಿ ಗ್ರಾಮ ಪಂಚಾಯ್ತಿಗಳಿಗೆ ಸಲ್ಲಿಸಲಾಗಿದೆ ಎಂದರು.
ತಲಮಟ್ಟದ ಸರ್ವೆ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಶಾಂತ್, ಉಪಾಧ್ಯಕ್ಷ ಮುರಳಿ, ಕೆ.ಎಸ್. ಶ್ರೀನಿವಾಸರೆಡ್ಡಿ, ಜಿಪಂ ತಾಂತ್ರಿಕ ವಿಭಾಗದ ಸಹಾಯಕ ಎಂಜಿನಿಯರ್ ಕೇಶವಮೂರ್ತಿ, ನಾರಾಯಣಪ್ಪ, ಮುನಿಶಾಮಿರೆಡ್ಡಿ, ವೆಂಕಟರಾಜು, ವೇಣುಗೋಪಾಲ್, ಮುನಿಯಪ್ಪ, ಅಶೋಕ್, ವೇಣು ಮತ್ತಿತರರು ಉಪಸ್ಥಿತರಿದ್ದರು.