ವೇದಗಳಿಂದ ಸಾಮಾಜಿಕ ಸಾಮರಸ್ಯ
ಕೋಲಾರ: ವೇದಗಳು ಸಮಾಜದಲ್ಲಿ ನೆಮ್ಮದಿ ಸಾಮಾಜಿಕ ಸಾಮರಸ್ಯ ಕಾಪಾಡಲು ಸಹಕಾರಿಯಾಗಿವೆ ಎಂದು ವೇದ ಸಂಸ್ಕೃತ ವಿದ್ವಾಂಸರಾದ ವಿದ್ವಾನ್ವಾದಿರಾಜಾಚಾರ್ಯ ಜೋಷಿ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಇಲ್ಲಿನ ಪಿಸಿ ಬಡಾವಣೆಯ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಶ್ರೀವೇದವ್ಯಾಸ ವೇದ ಸಂಸ್ಕೃತ ಪಾಠಶಾಲಾ ದಶಮಾನೋತ್ಸವ ಕಾರ್ಯಕ್ರಮದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ವೇದಗಳ ಪಠಣದಿಂದ ರೋಗಗಳು ಗುಣಮುಖವಾಗುತ್ತವೆ, ವೇದಾಧ್ಯಯನ ಮಾಡುವವನಲ್ಲಿ ನೆಮ್ಮದಿ, ಶಾಂತಿ ನೆಲಸಿರುತ್ತದೆ, ಬ್ರಾಹ್ಮಣರು ದೈನಂದಿನ ಕರ್ಮಗಳಿಂದ ವಿಮುಖರಾಗದೇ ಲೌಕಿಕ ವಿದ್ಯೆಯೊಂದಿಗೆ ಪಾರಂಪರಿಕ ವಿದ್ಯೆಯಾದ ವೇದವನ್ನು ಕಲಿಯಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಸಂಘದ ಅಧ್ಯಕ್ಷ ಟಿ.ಜಿ. ರಾಮಪ್ಪ ವಹಿಸಿದ್ದರು. ಉಪನ್ಯಾಸಕ ಜೆ.ಎನ್. ರಾಮಕೃಷ್ಣ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ದಶಮಾನೋತ್ಸವದ ಅಂಗವಾಗಿ ವೇದಪಾಠಶಾಲೆಯಿಂದ ವಿವಿಧ ಬಡಾವಣೆಗಳಲ್ಲಿ ವಾರಕ್ಕೆರಡು ದಿನ ವೇದಪಾಠ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಲಾಯಿತು.