ಸಾಲ ಮರು ಪಾವತಿ ಮಾಡಿ; ರೈತರಿಗೆ ಕರೆ
ಶಿಡ್ಲಘಟ್ಟ: ಇತರರಿಗೆ ಆರ್ಥಿಕ ನೆರವು ಒದಗಿಸುವ ಸಲುವಾಗಿ ರೈತರು ಬ್ಯಾಂಕಿನಿಂದ ಪಡೆದುಕೊಂಡಿರುವ ಸಾಲವನ್ನು ಮರುಪಾವತಿ ಮಾಡಬೇಕೆಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ಆನೂರು ನಾಗರಾಜ್ ಮನವಿ ಮಾಡಿದರು.
ಪಟ್ಟಣದ ಎಸ್ಎಫ್ಸಿಎಸ್ ಸೊಸೈಟಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಎಸ್ಎಫ್ಸಿಎಸ್ ಸೇರಿದಂತೆ 8 ವಿಎಸ್ಎಸ್ಎನ್ ಸಂಘಗಳು ನಿಷ್ಕ್ರೀಯಗೊಂಡಿದ್ದು ಇನ್ನುಳಿದಂತೆ ಇ. ತಿಮ್ಮಸಂದ್ರ, ಸಾದಲಿ, ಆನೇಮಡಗು, ಜಂಗಮಕೋಟೆ, ಮಳ್ಳೂರು, ಮಳಮಾಚನಹಳ್ಳಿ ಸಂಘಗಳ ಸಕ್ರಿಯವಾಗಿದೆ ಎಂದರು.
ತಾಲೂಕಿನ ಜಂಗಮಕೋಟೆ ಎಸ್ಎಫ್ಸಿಎಸ್ ಸಂಘದ ಮೂಲಕ 3 ಕೋಟಿ ಸಾಲವನ್ನು ನೀಡಿದ್ದರೂ ಸಹ ವಸೂಲಾತಿಯಲ್ಲಿ ಸಹ ಸ್ಥಳೀಯ ಪಿಎಲ್ಡಿ ಬ್ಯಾಂಕನ್ನು ಮೀರಿಸಿದೆ ಎಂದ ಅವರು, ಶಿಡ್ಲಘಟ್ಟ ಪಟ್ಟಣದ ಎಸ್ಎಫ್ಸಿಎಸ್ ಮೂಲಕ ನೀಡಿರುವ ಸಾಲವನ್ನು ಶೇ.60ರಿಂದ 80ರಷ್ಟು ವಸೂಲಿ ಮಾಡುವ ಮೂಲಕ ಸಂಘದ ಚಟುವಟಿಕೆಗಳನ್ನು ಚುರುಕುಗೊಳಿಸಬೇಕೆಂದು ಸೂಚಿಸಿದ ಅವರು, ಸೊಸೈಟಿಯ ಅಭಿವೃದ್ಧಿಗೆ ಡಿಸಿಸಿ ಬ್ಯಾಂಕ್ ಮೂಲಕ ಅಗತ್ಯ ಹಣಕಾಸಿನ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.
ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಎಂಬ ಪಕ್ಷಪಾತ ಮರೆತು ಮತದಾರರು ತಮ್ಮನ್ನು ಬೆಂಬಲಿಸಿದ್ದು ರೈತರ ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಇ. ತಿಮ್ಮಸಂದ್ರ ಶಿವಾರೆಡ್ಡಿ, ಆನೂರು ಪಿ.ವಿ. ನಾಗರಾಜ್ ಹಾಗೂ ಎಸ್ಎಫ್ಸಿಎಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ವೆಂಕಟೇಶಪ್ಪ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಎಫ್ಸಿಎಸ್ ಅಧ್ಯಕ್ಷ ರಾಮಚಂದ್ರಪ್ಪ, ನಿರ್ದೇಶಕರಾದ ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ರಾಘವೇಂದ್ರ, ಅಶ್ವತ್ಥನಾರಾಯಣ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿಡ್ಡಪ್ಪ, ತಾಲೂಕು ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.