ಕೊಳವೆ ಬಾವಿಯಲ್ಲಿ ನೀರು: ಸಮಸ್ಯೆ ಪರಿಹಾರಕ್ಕೆ ಸಂತಸ
ಬಂಗಾರಪೇಟೆ: ಹುದುಕುಳ ಗ್ರಾಮದ ಕೆರೆಯಲ್ಲಿ ಕೊರೆಸಿರುವ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಹೊಸ ಕೊಳೆವೆಬಾವಿ ಕೊರೆಸಿದ್ದರು ಇದರಲ್ಲಿ ನೀರು ಲಭ್ಯವಾಗಿದ್ದು ಗ್ರಾಮಸ್ಥರಿಗೆ ವಿಜಯದಶಮಿ ಹಬ್ಬದ ಕೊಡುಗೆಯಾಗಿ ಶಾಸಕರು ಚಾಲನೆ ನೀಡಿದರು. ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕೆರೆಗಳಲ್ಲಿ ತುಂಬಿರುವ ಹೂಳೆತ್ತುವ ಕೆಲಸಕ್ಕೂ ಚಾಲನೆ ನೀಡಲಾಗಿದೆ. ಯರಗೋಳ್ ಯೋಜನೆಯ ಅಣೆಕಟ್ಟು ನಿರ್ಮಾಣಕ್ಕೂ ಮುಖ್ಯಮಂತ್ರಿಗಳು ಈಗಾಗಲೇ ಚಾಲನೆ ನೀಡಿದ್ದು, ಕಾಮಗಾರಿ ನಡೆಯುತ್ತಿದೆ. ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಎಂ.ಎಸ್. ಆನಂದ್, ಅನಿತಾ, ಸದಸ್ಯ ಚಂದ್ರಯ್ಯಶೆಟ್ಟಿ, ರವಿ, ಪ್ರಕಾಶ್, ವೆಂಕಟೇಶಪ್ಪ ಇದ್ದರು.
ಚಿನ್ನದ ಗಣಿ ಬೀಮ್ ಕಳವು: ಒಬ್ಬ ಆರೋಪಿ ಬಂಧನ
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಗೆ ಸೇರಿದ ಕಬ್ಬಿಣದ ಬೀಮ್ಗಳನ್ನು ಆಟೋದಲ್ಲಿ ಕಳವು ಮಾಡಿಕೊಂಡು ಹೋಗುತ್ತಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಚಾಂಪಿಯನ್ರೀಫ್ನ ವರ್ಕ್ ಶಾಪ್ ಬಳಿ ನಡೆದಿದೆ.
ಬಿಜಿಎಂಎಲ್ ಚಿನ್ನದ ಗಣಿ ವರ್ಕ್ಶಾಪ್ನಲ್ಲಿ ಸಾವಿರಾರು ಬೆಲೆ ಬಾಳುವ ಕಬ್ಬಿಣದ ಬೀಮ್ಗಳನ್ನು ಕಳ್ಳರು ಕಳವು ಮಾಡಿಕೊಂಡು ಆಟೋದಲ್ಲಿ ಸಾಗಿಸುತ್ತಿದ್ದಾಗ ಚಾಂಪಿಯನ್ರೀಫ್ ಠಾಣಾ ಪೊಲೀಸರನ್ನು ಕಂಡು ಆಟೋ ಸ್ಥಳದಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ ಮೂವರು ಆರೋಪಿಗಳ ಪೈಕಿ ಆಂಡ್ರಸನ್ಪೇಟೆ ವ್ಯಾಪ್ತಿಯ ಭಾರತೀಪುರಂ ನಿವಾಸಿ ಸರ್ದಾರ್ ಎಂಬವನನ್ನು ಬಂಧಿಸಿ ವಿಚಾರಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದು ಆಟೋ ಮತ್ತು ಕಳವು ಮಾಲನ್ನು ವಶಪಡಿಸಿಕೊಂಡ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.