ಭಾವೈಕ್ಯತಾ ಕವಿಗೋಷ್ಠಿ
ಮಾಲೂರು: ಮಾನವೀಯತೆಯ ಸದ್ಭಾವನೆಗಳು ಸಂಕುಚಿತಗೊಳ್ಳುತ್ತಿರುವುದು ವಿಷಾದನೀಯ ಎಂದು ಬಾಪೂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ವಿ. ಹನುಮಂತಯ್ಯ ಹೇಳಿದರು.
ಪಟ್ಟಣದ ಕೃಷಿಕ ಸಮಾಜದಲ್ಲಿ ಸ್ಥಳೀಯ ಚುಟುಕ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಭಾವೈಕ್ಯತಾ ಕವಿಗೋಷ್ಠಿಯಲ್ಲಿ ಮಾತನಾಡಿ, ಬಲಪಂಥೀಯ ವಾದಿಗಳ ನಡುವೆ ಬಿರುಕು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವಧರ್ಮದ ಅಂಶಗಳನ್ನು ಮೂಡಿಸುವಲ್ಲಿ ಸರ್ವತಾ ದುಡಿಯಬೇಕು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಸದಸ್ಯ ಜಾಕೀರ್ ಖಾನ್ ಮಾತನಾಡಿ, ಭಾವೈಕ್ಯತೆ ಎಂಬ ಪದದ ಒಳಗಡೆ ನಾವೂ ಜೀವನ ಮಾಡುತ್ತಿದ್ದೇವೆ. ಆದರೆ ದೇಹದ ಐಕ್ಯತೆಯಲ್ಲಿ ಬಿರುಕು ಹಾಗೇ ಉಳಿದಿದೆ ಎಂದರು. ಡಾ.ನಾ. ಮುನಿರಾಜು,ನ. ಗುರುಮೂರ್ತಿ, ಕುಂತೂರು ಚಂದ್ರಪ್ಪ,ಪ್ರಸನ್ನ, ಡಿ.ಟಿ. ಶ್ರೀನಿಧಿ ಶ್ರೀನಿವಾಸ್, ದೂಡ್ಡಕಲ್ಲಹಳ್ಳಿ
ನಾರಾಯಣಪ್ಪ, ಗುಟ್ಟಪ್ಪ, ಕೋಳಾಲಪ್ಪ, ತಿಮ್ಮರಾಯಪ್ಪ, ಹುಲ್ಕೂರು ವೆಂಕಟೇಶ್, ಕೆ.ಮು. ಕೃಷ್ಣಪ್ಪ, ಶ್ರೀನಿವಾಸ್, ಪವಿತ್ರ, ಇಂದ್ರಮ್ಮ ಕವಿತೆಗಳನ್ನು ವಾಚಿಸಿದರು. ಕಲಾವಿದರಾದ ಗುಟ್ಟಪ್ಪ ಹಾಗೂ ಗಾಯಕ ಗುಲ್ಚಾರ್ರನ್ನು ಸನ್ಮಾನಿಸಲಾಯಿತು.
ಎನ್ಎಸ್ಎಸ್ ಸಮಾರೋಪ
ಮಾಲೂರು: ರಾಷ್ಟ್ರೀಯ ಸೇವಾ ಶಿಬಿರದ ಅನುಭವ ಭವಿಷ್ಯದ ಜೀವನದಲ್ಲಿ ಸಹಕಾರಿಯಾಗುವುದರಿಂದ ಇಲ್ಲಿ ಕಲಿತ ಪಾಠವನ್ನು ಮುಂದುವರೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಬ್ರಮಣಿ ಹೇಳಿದರು. ತಾಲೂಕಿನ ಅರಳೇರಿ ಗ್ರಾಮದಲ್ಲಿ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ಹಮ್ಮಿಕೊಂಡಿದ್ದ 7 ದಿನಗಳ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಉತ್ತಮ ಸಮಾಜ ನಿರ್ಮಿಸಲು ಇಂತಹ ಶಿಬಿರಗಳಲ್ಲಿ ಕಲಿತ ವಿಷಯಗಳನ್ನು ಮರೆಯದೆ ಮುಂದುವರೆಸಿ ಎಂದರು. ಪ್ರಾಂಶುಪಾಲ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ನಾಗರಾಜಯ್ಯ, ಎನ್.ಸಿ. ಚಂದ್ರಪ್ಪ, ಜೆ. ವೆಂಕಟೇಶ, ಗಿರೀಶ್ ಕುಮಾರ್, ಮಂಜುನಾಥ ಪ್ರಸನ್ನ, ಗೋಪಾಲಕೃಷ್ಣ, ಚೌಡಪ್ಪ, ಸುಬ್ರಮಣಿ,ದೇವರಾಜ್ ಇದ್ದರು.
ಎಪಿಎಂಸಿಗೆ ನಾಮಪತ್ರ ಸಲ್ಲಿಕೆ
ಚಿಂತಾಮಣಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2010-11 ರಿಂದ 2014-15 ನೇ ಸಾಲುಗಳ ಉಳಿದ 5 ಸಹಕಾರ ವರ್ಷಗಳಿಗೆ ದಿನಾಂಕ 15-10-2013 ರಂದು ಎ ವರ್ಗದ ಸದಸ್ಯರಿಂದ 7 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಈ ಕೆಳಕಂಡ ಸದಸ್ಯರಿಂದ ಸಲ್ಲಿಕೆಯಾಗಿದೆ. ಬಿ.ಆರ್. ಪ್ರಕಾಶ್ ಗುಪ್ತ ಕೊಡದವಾಡಿ, ಬಿ. ಮಂಜುನಾಥ ಮಿಟ್ಟಹಳ್ಳಿ, ಎನ್. ಶಂಕರಪ್ಪ, ಬಿ.ಎನ್. ಶ್ರೀನಿವಾಸಪ್ಪ ಊಲವಾಡಿ, ಎಸ್.ಪಿ. ರಮೇಶ್ ಬಾಬು ಶೆಟ್ಟಿಹಳ್ಳಿ, ಆರ್. ಶಿವಾರೆಡ್ಡಿ ಬಟ್ಲಹಳ್ಳಿ, ಎಸ್.ಪ್ರದೀಪ್ ಕೋಟಗಲ್, ಎಚ್.ಸಿ. ಲಕ್ಷ್ಮಿನಾರಾಯಣ ವೈಜಕೂರು, ಕೆ.ಎಂ. ಮಂಜುನಾಥ ಕುರುಬೂರು, ವಿ.ನಾರಾಯಣಸ್ವಾಮಿ ನಂದಿಗಾನಹಳ್ಳಿ, ಪ್ರಸಾದರೆಡ್ಡಿ ಟಿ. ಗೊಲ್ಲಹಳ್ಳಿ, ಗೋಪಾಲಕೃಷ್ಣರೆಡ್ಡಿ ಯಗವಕೋಟೆ, ಬಿ. ನಾರಾಯಣಸ್ವಾಮಿ ಬೊಮ್ಮೇಪಲ್ಲಿ, ಎಂ.ಇ.ಶ್ರೀನಿವಾಸರೆಡ್ಡಿ ಯನಮಲಪಾಡಿ. ವಿ.ಎಸ್.ಎಸ್.ಎನ್ ಸಂಘಗಳ ವತಿಯಿಂದ ನಾಮಪತ್ರ ಸಲ್ಲಿಸಿದ್ದಾರೆ ಎಂದು ಟಿ.ಎ.ಪಿ.ಸಿ.ಎಂ.ಎಸ್ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಸೈಕಲ್ ತೊಳೆಯಲು ಹೋದ ಇಬ್ಬರು ಬಾಲಕರ ಸಾವು
ಚಿಕ್ಕಬಳ್ಳಾಪುರ: ಸೈಕಲ್ ತೊಳೆಯಲು ಹೋಗಿದ್ದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಮುಷ್ಟೂರಲ್ಲಿ ನಡೆದಿದೆ.
ಬಾಲಕರನ್ನು ಗ್ರಾಮದ ಸುನೀಲ್ ಬಿನ್ ವೆಂಕಟೇಶಪ್ಪ(7) ಮತ್ತು ಮನು ಬಿನ್ ಗುರ್ರಪ್ಪ(8) ಎಂದು ಗುರುತಿಸಲಾಗಿದೆ.
ಆಯುಧ ಪೂಜೆಯ ದಿನ ಈ ಬಾಲಕರು ತಮ್ಮ ಸೈಕಲ್ ತೊಳೆಯಲು ಗ್ರಾಮಕ್ಕೆ ಸಮೀಪದ ಕೆರೆಗೆ ಹೋಗಿದ್ದು, ಇತ್ತೀಚೆಗಷ್ಟೇ ಮಳೆ ಸುರಿದು ಕೆರೆಯಲ್ಲಿ ಹೆಚ್ಚಿಗೆ ನೀರು ಸಂಗ್ರಹವಾಗಿತ್ತು. ಅಲ್ಲದೆ ಹೂಳೆತ್ತಲಾಗಿತ್ತು. ಹಾಗಾಗಿ ಆಳವಾಗಿದ್ದ ಕೆರೆಯಲ್ಲಿ ಬಾಲಕರು ಈಜಲು ಯತ್ನಿಸಿದ್ದೇ ಜೀವಕ್ಕೆ ಮುಳುವಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನಾರೋಗ್ಯ ಪೀಡಿತ ಮಗುವಿಗೆ ನೆರವು
ಕೆಜಿಎಫ್: ಸಮೀಪದ ಕೂಡುಗಲ್ ಗ್ರಾಮದ ರುಚಿತ ಎಂಬ 6 ವರ್ಷದ ಬಾಲಕಿ ಕೆಲ ತಿಂಗಳಿಂದ ತಲಸೆಮೀಯಾ ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ 12 ಲಕ್ಷ ವೆಚ್ಚವಾಗುವುಗುವುದಾಗಿ ಚೆನ್ನೈ ಅಪೊಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಅದೇ ರೀತಿ ಕೆಜಿಎಫ್ ಸರ್ಕಾರಿ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಗ್ಗೂಡಿ ಸುಮಾರು 40 ಸಾವಿರ ಹಾಗೂ ಬಾಲಕೀಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿರೆಡ್ಡಿ ಅವರು ತಮ್ಮ ವೈಯುಕ್ತಿಕ 10 ಸಾವಿರ ರು. ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.
ಶಾಂತಿ ಸಂದೇಶ ಸಾರಲು ಸೈಕಲ್ ಜಾಥಾ
ಬಂಗಾರಪೇಟೆ: ಪ್ರಜಾಪಿತ ಭ್ರಹ್ಮಕುಮಾರಿ ವಿವಿಯಿಂದ ಉಜ್ವಲ ಭಾರತಕ್ಕಾಗಿ ಕಡಪದಿಂದ ಬೆಂಗಳೂರಿನವರೆಗೂ ಶಾಂತಿದೂತ ಯುವ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದು ಭಾನುವಾರ ಪಟ್ಟಣಕ್ಕೆ ಆಗಮಿಸಿತು.
ತಂಬಾಕು, ಕುಡಿತದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ, ಯುವ ಸಶಕ್ತೀಕರಣ ಹಾಗೂ ಯುವ ಶಕ್ತಿಯನ್ನು ಉಜ್ವಲ ಭಾರತ ನಿರ್ಮಾಣಕ್ಕಾಗಿ ಪ್ರೇರೇಪಿಸುವುದಕ್ಕೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪಿತ ಭ್ರಹ್ಮಕುಮಾರಿ ಸಂಸ್ಥೆ ಹೇಳಿದೆ.
ಹಾಲು ಒಕ್ಕೂಟದ ನಿರ್ದೇಶಕರ ಆಯ್ಕೆ
ಮದ್ದೂರು: ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾಗಿ ರಾಮಕೃಷ್ಣೇಗೌಡ ಅವರನ್ನು ಸರ್ಕಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ತಾಲೂಕಿನ ಆತಗೂರು ಹೋಬಳಿ ಲಿಂಗಣ್ಣನದೊಡ್ಡಿ ಗ್ರಾಮದ ಲೇ.ಲಿಂಗೇಗೌಡ ಉ. ತಮ್ಮಯ್ಯ ಪುತ್ರ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾಗಿ ನೇಮಕ ಮಾಡಿ ಸಹಕಾರ ಇಲಾಖೆ ಜಂಟಿ ಕಾರ್ಯದರ್ಶಿ ಎಚ್.ಎಸ್. ನಾಗರಾಜಯ್ಯ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಲು ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಅಂಬರೀಷ್, ಸಂಸದೆ ರಮ್ಯಾ, ಮಾಜ ಶಾಸಕ ಮಧು ಜಿ. ಮಾದೇಗೌಡ ಸೇರಿದಂತೆ ಜಿಲ್ಲಾ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ರಾಮಕೃಷ್ಣೇಗೌಡ ಕೃತಜ್ಞತೆ ಸಲ್ಲಿಸಿದ್ದಾರೆ.
ಗ್ರಾಮ ಸಭೆ
ಮಂಡ್ಯ: ತಾಲೂಕಿನ ಹಲ್ಲೇಗೆರೆ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಅ.15 ರಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ 1ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ನಡೆಯಲಿದೆ. ನೋಡಲ್ ಅಧಿಕಾರಿಗಳಾಗಿ ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕೆ.ಬಿ. ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
18ರಂದು ಮಹರ್ಷಿ ವಾಲ್ಮೀಕಿ ಜಯಂತಿ
ಮಂಡ್ಯ: ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಅ. 18 ರಂದು ಬೆಳಗ್ಗೆ 11 ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಡೆಯಲಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾಲತಿ ಬಿ. ರವರು ತಿಳಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಮೆರವಣಿಗೆ ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಟು ನೂರು ಅಡಿ ರಸ್ತೆಯ ಮೂಲಕ ಕಲಾಮಂದಿರದಲ್ಲಿ ಸಮಾರೋಪಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಂಬರೀಷ್ ಅವರು ಸಮಾರಂಭ ಉದ್ಘಾಟಿಸಿ ಅಧ್ಯಕ್ಷತೆ ವಹಿಸುವರು.
ಕಾವಾಡಿಗಳಿಗೆ ಉಪಾಹಾರ
ಮೈಸೂರು: ದಸರೆಯಲ್ಲಿ ಭಾಗವಹಿಸಲು ಆಗಮಿಸಿರುವ ಆನೆ ಮಾವುತರು, ಕಾವಾಡಿಗಳ ಕುಟುಂಬದವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾನುವಾರ ಬೆಳಗ್ಗೆ ಉಪಾಹಾರ ವ್ಯವಸ್ಥೆ ಮಾಡಿದ್ದರು. ಅರಮನೆ ಆವರಣದಲ್ಲಿರುವ ಆನೆ ಬಿಡಾರದ ಪಕ್ಕದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಆನೆ ಮಾವುತರು, ಕಾವಾಡಿಗಳ ಕುಟುಂಬದವರಿಗೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಉಪಹಾರ ಬಡಿಸಿದರು. ಯಡಿಯೂರಪ್ಪ ಅವರೊಟ್ಟಿಗೆ ಕುಳಿತು ಉಪಹಾರ ಸೇವಿಸಿದರು. ಯಡಿಯೂರಪ್ಪ ಅವರೊಂದಿಗೆ ಮಾವುತರು, ಕಾವಾಡಿಗಳು ಇಡ್ಲಿ, ಪೊಂಗಲ್ ಸೇವಿಸಿದರು.
ಹುಟ್ಟುಹಬ್ಬ ಆಚರಣೆ
ಮಂಡ್ಯ: ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಅವರ 42ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಕೊತ್ತತ್ತಿ ಹೋಬಳಿ ವ್ಯಾಪ್ತಿಯ ಅಭಿಮಾನಿಗಳು ನಗರದ ಸ್ವರ್ಣಸಂದ್ರ ಬಡಾವಣೆಯ ಪ್ರೇರಣ ವಿಕಲಚೇತನರ ವಸತಿ ಶಾಲೆಯ ಮಕ್ಕಳಿಗೆ ಹಣ್ಣು ಸಿಹಿ ವಿತರಿಸಿದರು. ಸಾಮಾಜಿಕ ಬದುಕಿನಲ್ಲಿ ವಿಕಲಚೇತನರು ಆತ್ಮಸ್ಥೈರ್ಯದಿಂದ ವಿದ್ಯಾಭ್ಯಾಸ ಕಲಿತು, ಉತ್ತಮ ಜೀವನ ರೂಪಿಸಿಕೊಳಬೇಕು. ದೀನ, ವಿಕಲಚೇತನರಿಗೆ ನೆರವು ನೀಡಬೇಕು ಅಭಿಮಾನಿಗಳು ಹೇಳಿದರು. ಕೊತ್ತತ್ತಿ ರಾಜು, ಚೇತನ್, ತಗ್ಗಹಳ್ಳಿ ಪುನೀತ್ ಕುಮಾರ್, ಹಳುವಾಡಿ ರಾಜು, ದಾಸೇಗೌಡ, ಪುರ ರವಿ, ಮಹೇಶ್, ಚೀರನಹಳ್ಳಿ ಕುಮಾರ್, ದಾಸೇಗೌಡ, ರವಿ, ಕೃಷ್ಣ ಇದ್ದರು.