ರಸ್ತೆ ಅಭಿವೃದ್ಧಿಗೆ ನಾಯಕರ ಇಚ್ಛಾಶಕ್ತಿ ಕೊರತೆ
ಬಾಗೇಪಲ್ಲಿ: ಪಟ್ಟಣದ ಪ್ರಮುಖ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಿ ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿ ಕಾಣದೇ ನೆನೆಗುದಿಗೆ ಬಿದ್ದಿದೆ. ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.
ರಾಷ್ಟ್ರೀಯ ಹೆದ್ದಾರಿ 7 ರಿಂದ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಸಂಪರ್ಕದ ಕೊಂಡಿಯಾಗಿರುವ ಈ ರಸ್ತೆ ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯಾಗಿರುವುದರಿಂದ(ಬಾಗೇಪಲ್ಲಿ-ಬಂಗಾರಪೇಟೆ)ಈ ಮಾರ್ಗದಲ್ಲಿ ವಾಹನ ಸಂಚಾರ ಸದಾ ಅಧಿಕ. ಪಟ್ಟಣದ ವ್ಯಾಪ್ತಿಯ ಏಕೈಕ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಆಗುವ ಅಡಚಣೆ ತಪ್ಪಿಸಸಲು ಕೋಟ್ಯಂತರ ರು. ವೆಚ್ಚದಲ್ಲಿ ಎನ್ಎಚ್ 7ರಿಂದ ನ್ಯಾಷನಲ್ ಕಾಲೇಜಿನವರೆಗೂ ರಸ್ತೆ ಅಗಲೀಕರಣ ಮಾಡಲಾಗಿತ್ತು.
ರಸ್ತೆ ಅಗಲೀಕರಣ: ರಸ್ತೆಯ ಮಧ್ಯಭಾಗದಿಂದ 49.5 ಅಡಿಗಳಂತೆ ಎರಡೂ ಬದಿಗಳಲ್ಲಿ 100 ಅಡಿಗಳ ಸರಹದ್ದು ನಿಗಧಿಗೊಳಿಸಿ ರಸ್ತೆಯ ಮಧ್ಯ ಭಾಗದಲ್ಲಿ ವಿಭಜಕ ಹಾಕಿ, ಕಟ್ಟಡಗಳನ್ನು ಮರಗಳನ್ನು ಉರುಳಿಸಿ 8 ವರ್ಷಗಳೇ ಕಳೆದಿದೆ. ಆದರೆ ನಂತರದ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಯಾರೂ ಗಮನ ಹರಿಸಿಲ್ಲ. ರಸ್ತೆ ಅಗಲೀಕರಣದಿಂದ ರಸ್ತೆ ಬದಿಯ ವ್ಯಾಪಾರಸ್ಥರಿಗೆ, ವಾಹನಗಳನ್ನು ನಿಲುಗಡೆ ಮಾಡುವವರಿಗೆ ಅನುಕೂಲವಾಯಿಗಿ ಸಾರ್ವಜನಿಕರಿಗೆ ಕಿರಿಕಿರಿ ತಪ್ಪಲಿಲ್ಲ. ಹಿಂದೆ ರಸ್ತೆಗೆ ಅಡ್ಡಲಾಗಿದ್ದ ಅಂಗಡಿ ಕಟ್ಟಡ ಮಾಲೀಕರಿಗೆ ಪರಿಹಾರ ನೀಡಿ, ಕಟ್ಟಡಗಳನ್ನು ಕೆಡವಿ ರಸ್ತೆ ಅಗಲೀಕರಣ ಮಾಡಲಾಯಿತು. ಆದರೆ ರಸ್ತೆಯ ಎರಡೂ ಬದಿ ಇದ್ದ ವಿದ್ಯುತ್ ಕಂಬಗಳನ್ನು ತೆರೆವುಗೊಳಿಸಲು ಈವರೆಗೂ ಸಾಧ್ಯವಾಗಿಲ್ಲ.
ಓಡಾಟಕ್ಕೆ ತೊಂದರೆ: ಖಾಸಗಿ ಬಸ್ಸುಗಳು, ಲಾರಿ, ಟ್ಯಾಕ್ಸಿ, ಆಟೋ ಸೇರಿದಂತೆ ವಿವಿಧ ವಾಹನಗಳನ್ನು ಪ್ರಮುಖ ರಸೆಯ ಮಧ್ಯೆ ಭಾಗದಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ವಿವಿಧ ಅಂಗಡಿಗಳನ್ನು ಗೇಟ್ ಮುಂಭಾಗದಲ್ಲೇ ಇಟ್ಟಿರುವುದರಿಂದ ತುರ್ತು ಸಮಯದಲ್ಲಿ ರೋಗಿಗಳನ್ನು ಅ್ಯಂಬುಲೆನ್ಸ್ಗೆ ಸಾಗಿಸಲು ತೊಂದರೆಯಾಗುತ್ತಿದೆ. ಸರ್ಕಾರಿ ಬಸ್ಸು ನಿಲ್ದಾಣದ ಮುಂದೆ, ತಾಲೂಕು ಕಚೇರಿ ಮುಂಭಾಗ, ಪೊಲೀಸ್ ಠಾಣೆಯ ಮುಂಭಾಗದಲ್ಲಿ, ಸರ್ಕಾರಿ ಆಸ್ಪತ್ರೆ, ಉರ್ದು ಶಾಲೆಯ ಮುಂಭಾಗ ಸೇರಿದಂತೆ ರಸ್ತೆಯ ಉದ್ದಗಲಕ್ಕೂ ರಸ್ತೆಯ ಎರಡೂ ಬದಿಯಲ್ಲಿ ಬೀದಿ ವ್ಯಾಪಾರಸ್ಥರು ರಸ್ತೆಯನೇನು ಅಕ್ರಮಿಸಿಕೊಂಡಿದ್ದಾರೆ. ಉಳಿದ ಸ್ಥಳವನ್ನು ವಾಹನಗಳನ್ನು ನಿಲ್ಲಿಸಲು ಅಕ್ರಮಿಸಿಕೊಳ್ಳುವುದರಿಂದ ದಿನನಿತ್ಯ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ.
ಮಧ್ಯ ರಸ್ತೆಯೇ ಮಾರುಕಟ್ಟೆ: ಖಾಸಗಿ ಬಸ್ಸುಗಳು ಮಧ್ಯೆರಸ್ತೆಯಲ್ಲಿಯೇ ಗಂಟೆಗಟ್ಟಲೇ ನಿಲ್ಲಿಸಿದ್ದರೂ, ರಸ್ತೆಗೆ ಅಡ್ಡವಾಗಿ ಅಂಗಡಿ ಮುಂಗ್ಗಟ್ಟುಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದರೂ, ಆಟೋ ಚಾಲಕರು ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಚಾಲನೆ ಮಾಡುತ್ತಿದ್ದರೂ ಪೊಲೀಸರು ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪೊಲೀಸರನ್ನು ವಿಚಾರಿಸಿದರೆ ರಸ್ತೆ ಅಗಲೀಕರಣ ಮುಗಿದಿದೆ, ಫುಟ್ ಪಾತ್ ರಸ್ತೆ ನಿರ್ಮಾಣವಾಗುವವರೆಗೂ ಸಂಚಾರ ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹಾರಿಕೆಯ ಉತ್ತರ ನೀಡುತ್ತಾರೆ.
ಶಾಸಕರಾದರೂ ಇತ್ತ ಗಮನ ಹರಿಸಿ ನೆನಗುದಿಗೆ ಬಿದ್ದಿರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಆಗುತ್ತಿರಿರುವ ಕಿರಿಕಿರಿ ತಪ್ಪಿಸುವರೇ ಎನ್ನುವುದನ್ನು ಕಾದು ನೋಡಬೇಕಾಗಿದೆ.