ವಿಜಯದಶಮಿ ಪ್ರಯುಕ್ತ ಸಂಭ್ರಮದ ಬನ್ನಿ ಪೂಜೆ
ಕನ್ನಡಪ್ರಭ ವಾರ್ತೆ ಕೋಲಾರ ಅ.14
ಪ್ರತಿ ವರ್ಷದಂತೆ ಈ ಬಾರಿಯೂ ವಿಜಯ ದಶಮಿ ದಿನದಂದು ಕೋಲಾರ ತಾಲೂಕಿನ ಕೊಂಡರಾಜನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ತಾಲೂಕು ಆಡಳಿತ, ಮುಜರಾಯಿ ಇಲಾಖೆ, ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಬನ್ನಿ ಪೂಜೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ತಹಸೀಲ್ದಾರ್ ನಾಗರಾಜ್ ಅವರು ಸೋಮವಾರ ಸಂಜೆ 4 ಗಂಟೆಗೆ ಬನ್ನಿ ಗಿಡದ ರೆಂಬೆಗಳನ್ನು ಕಟ್ಟಿದ್ದ ಬಾಳೆ ಗಿಡಕ್ಕೆ ಪೂಜೆ ಸಲ್ಲಿಸಿದ ನಂತರ ಜನತೆಯ ಹರ್ಷೋದ್ಗಾರದ ನಡುವೆ ಬಾಳೆ ಗಿಡವನ್ನು ಕತ್ತಿಯಿಂದ ಕತ್ತರಿಸಿದರು.
ಬನ್ನಿ ಎಲೆಯನ್ನು ಸಂಗ್ರಹಣೆ ಮಾಡಿ ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದೆಂಬ ನಂಬಿಕೆಯಿಂದಾಗಿ ಜನರು ಬನ್ನಿ ಎಲೆಗಾಗಿ ಪೈಪೋಟಿ ನಡೆಸಿದರು.
ಪೊಲೀಸರ ಸರ್ವಕಾವಲು ಭೇದಿಸಿ ಬನ್ನಿ ಎಲೆಯನ್ನು ತಮದಾಗಿಸಿಕೊಳ್ಳುವುದಕ್ಕೆ ಎದ್ದು ಬಿದ್ದು ಓಡಿ ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು.
ಬನ್ನಿ ಪೂಜೆ ನೆರವೇರಿಸಿದ ತಹಸೀಲ್ದಾರ್ನಾಗರಾಜ್ ಅವರು ಜನತೆಯನ್ನು ಉದ್ದೇಶಿಸಿ ಮಾತನಾಡಿ, ವಿಜಯದಶಮಿ ಪ್ರತಿಯೊಬ್ಬರಿಗೂ ವಿಜಯವನ್ನು ತಂದುಕೊಡಲಿ, ತಾಲೂಕಿನಲ್ಲಿ ಉತ್ತಮ ಮಳೆ ಬೆಳೆಯಾಗಿ ಜನತೆ ಸಂತೃಪ್ತಿಯಿಂದ ಜೀವನ ಸಾಗಿಸುವುದಕ್ಕೆ ದೇವರ ಆಶೀರ್ವಾದ ಸಿಗಲಿ ಎಂದು ಪ್ರಾರ್ಥಿಸಿದರು.
ವಿಜಯ ದಶಮಿ ಪ್ರಯುಕ್ತ ನಡೆದ ದೇವರ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದ ಪಲ್ಲಕ್ಕಿಗಳಿಗೆ ಕೊಂಡರಾಜನಹಳ್ಳಿ ಶ್ರೀ ಆಂಜನೇಯಸ್ವಾಮಿ ವಿಗ್ರಹ ನಿರ್ಮಾಣ ಸಮಿತಿ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು.
ಸಮಿತಿಯ ಅಧ್ಯಕ್ಷ ಅಪ್ಪಿ ಮಾತನಾಡಿ, ವಿಜಯ ದಶಮಿ ಹಬ್ಬದಂದು ತಾಲೂಕಿನ ವಿವಿಧ ಕಡೆಗಳಿಂದ ಹತ್ತಾರು ದೇವರ ಪಲ್ಲಕ್ಕಿಗಳು ಭಾಗವಹಿಸುತ್ತಿತ್ತು. ಈಗ ಕಡಿಮೆ ಆಗಿರುವುದರಿಂದ ಮುಂದಿನ ವರ್ಷ ಮುಜರಾಯಿ ಇಲಾಖೆಯಿಂದ ಸುತ್ತೊಲೆ ಹೊರಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮುಜರಾಯಿ ದೇವಾಲಯದ ಮೂರ್ತಿಗಳು ಉತ್ಸವದಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ಮನವಿ ಮಾಡಿದರು.
ಸಿಪಿಐ ಶಿವಕುಮಾರ್, ಕಂದಾಯ ಇಲಾಖೆಯ ಆರ್.ಐ ನಾಗರಾಜು, ಆಂಜನೇಯಸ್ವಾಮಿ ವಿಗ್ರಹ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಬಾಲಾಜಿ, ಖಜಾಂಚಿ ರಂಗನಾಥ್, ದೇವಾಲಯ ಅಭಿವೃದ್ಧಿ ಸಮಿತಿಯ ವೆಂಕಟರಮಣಪ್ಪ, ಶ್ರೀನಿವಾಸ್, ಮಂಜುನಾಥ್ ಮತ್ತಿತ್ತರರು ಇದ್ದರು.
ತಾಲೂಕಿನ ಶಿಳ್ಳಂಗೆರೆ ಗ್ರಾಮದಲ್ಲೂ ಬನ್ನಿ ಪೂಜೆ ನಡೆಯಿತು. ಮಹಾರಾಜರ ಕಾಲದಿಂದಲೂ ಇಲ್ಲಿ ವಿಜಯ ದಶಮಿ ಪ್ರಯುಕ್ತ ಬನ್ನಿ ಪೂಜೆ ನಡೆಸಲಾಗುತ್ತಿದೆ. ಮದು ಮಗನಂತೆ ಅಲಂಕಾರಗೊಂಡ ದಿವಾನನೊಬ್ಬ ಬನ್ನಿ ವೃಕ್ಷದಲ್ಲಿ ಬಾಣ-ಬಿಲ್ಲನ್ನಿಟ್ಟು ಪೂಜೆ ಮಾಡಿ ನಂತರ ಆಯುದ ಪ್ರಯೋಗದ ನಂತರ ಬನ್ನಿ ಎಲೆಗಳನ್ನು (ಶಮಿಪತ್ರೆ) ಜನರು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಶಿಳ್ಳಂಗೆರೆ ಗ್ರಾಮದಲ್ಲಿ ಲಕ್ಷ್ಮಿನರಸಿಂಹ ಸೇರಿದಂತೆ ಆರು ದೇವರ ಉತ್ಸವಗಳು ನಡೆಯುತ್ತವೆ.