ಹರಪನಾಯಕನಹಳ್ಳಿ ಕೋಟೆಯಲ್ಲಿ ಆಯುಧ ಪೂಜೆ
ಮುಳಬಾಗಲು: ಸುಮಾರು ಇನ್ನೂರು ವರ್ಷಗಳ ಹಿಂದೆ ಪಾಳೇಗಾರನಾಗಿದ್ದ ಬಿಸೇಗೌಡ ಈಗಲೂ ಸುತ್ತಮುತ್ತಲ ಗ್ರಾಮಗಳಲ್ಲಿ ದಂತಕಥೆಯಾಗಿದ್ದಾರೆ. ಅವರು ಟಿಪ್ಪುಸುಲ್ತಾನ್, ಮೈಸೂರು ಮಹರಾಜರ ಆಧೀನದಲ್ಲಿದ್ದ ಕೆಲವೇ ಪರಾಕ್ರಮಿಗಳಲ್ಲಿ ಒಬ್ಬರಾಗಿದ್ದನು. ನೆರೆಯ ಆಂಧ್ರ ಪ್ರದೇಶದ ಕಡಪ ಮುಂತಾದ ಕಡೆ ಇಂದಿಗೂ ಶುಭ ಕಾರ್ಯಗಳ ವೇಳೆ ಬಿಸೇಗೌಡರ ವೀಳ್ಯ ಕೊಡುವುದು ಪದ್ಧತಿಯಲ್ಲಿದೆ ಎನ್ನುತ್ತಾರೆ ಕೋಲಾರದ ವೈದ್ಯ ಡಾ. ಹರೀಶ್.
ಇವರು ಬಿಸೇಗೌಡರ ಕುರಿತು ಹಲವಾರು ವಿಷಯಗಳನ್ನು ಸಂಗ್ರಹಿಸಿದ್ದಾರೆ. ಬಿಸೇಗೌಡರು ಕದನದ ವೇಳೆ ಉಪಯೋಗಿಸುತ್ತಿದ್ದ ಯುದ್ಧ ಸಾಮಾಗ್ರಿಗಳೊಂದಿಗೆ ದಿನಚರಿ ಸಹ ಇದ್ದು ಇವುಗಳನ್ನು ಹೆಚ್ಚಿನ ಸಂಶೋಧನೆಗಾಗಿ ಕುಪ್ಪಂನ ದ್ರಾವಿಡ ವಿಶ್ವವಿದ್ಯಾನಿಲಯಕ್ಕೆ ನೀಡಲಾಗಿದೆ ಎಂದು ಅವರ ವಂಶಸ್ಥರಾದ ಪ್ರೊ. ಶ್ರೀನಿವಾಸಗೌಡ ತಿಳಿಸುತ್ತಾರೆ.
ಆಯುಧ ಪೂಜೆಯ ಪರ್ವ ದಿನದಂದು ಮಾತ್ರ ಬಿಸೇಗೌಡರು ಯುದ್ಧಕ್ಕೆ ಉಪಯೋಗಿಸುತ್ತಿದ್ದ ಸಾಮಾಗ್ರಿಗಳನ್ನು ತೆಗೆದು ಪೂಜಿಸಿ ನಂತರ ಪೆಟ್ಟಿಗೆಯಲ್ಲಿ ಭದ್ರ ಪಡಿಸಲಾಗುವುದು. ಸುತ್ತಮುತ್ತಲ ಹಾಗೂ ದೂರದ ಊರುಗಳಿಂದಲೂ ನೂರಾರು ಜನ ಬಂದು ಯುದ್ಧ ಸಾಮಾಗ್ರಿಗಳನ್ನು ವೀಕ್ಷಿಸುತ್ತಾರೆ.
ಬೀದಿ ನಾಯಿಗಳ ಕಾಟ ತಪ್ಪಿಸಲು ನಾಗರಿಕರ ಮನವಿ
ಚಿಂತಾಮಣಿ: ನಗರಸಭಾ ಅಧಿಕಾರಿಗಳು ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಮುಂದಾಗದೆ ಇರುವುದರಿಂದ ಪಟ್ಟಣದಲ್ಲಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಪಟ್ಟಣದ ಪ್ರತಿಷ್ಠಿತ ಬಡಾವಣೆಗಳಾದ ಪ್ರಭಾಕರ್ ಲೇಔಟ್, ಎನ್.ಆರ್. ಬಡಾವಣೆ, ಟ್ಯಾಂಕ್ ಬಂಡ್ ರಸ್ತೆ ಸೇರಿದಂತೆ ಇನ್ನೂ ಹಲವು ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದ ನಾಗರಿಕರಿಗೆ ತೊಂದರೆಯಾಗುತ್ತಿದ್ದರೂ ಗಮನ ಹರಿಸದ ನಗರಸಭಾ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸ್ಥಳೀಯ ನಾಗರಿಕರು ಅಸಮದಾನ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ನಗರಸಭಾ ಅಧಿಕಾರಿಗಳು ಇತ್ತ ಗಮನ ಹರಿಸಿ ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.