ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಲ್ಕಿ ಲಕ್ಷ್ಮಿವೆಂಕಟರಮಣ ಸ್ವಾಮಿಗೆ ಪೂಜೆ

Srinivasa Murthy VN
Updated On : 16 Oct 2013, 12:29 pm

ಚಿಂತಾಮಣಿ: ತಾಲೂಕಿನ ಪುರಾಣ ಪ್ರಸಿದ್ಧ ಆಲಂಬಗಿರಿ ಶ್ರೀ ಕಲ್ಕಿ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ನವರಾತ್ರಿಯ ವಿಜಯದಶಮಿಯಂದು ವಿಶೇಷ ಪೂಜಾ ಕೈಂಕರ್ಯವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನವರಾತ್ರಿ ಕೊನೆ ದಿನವಾದ ವಿಜಯದಶಮಿಯಂದು ಬೆಳಗ್ಗಿನಿಂದಲೇ ಭಕ್ತರು ದೇವಾಲಯದಲ್ಲಿ ಪೂಜೆಗಾಗಿ ಆಗಮಿಸಿದ್ದರು. ವಿಜಯದಶಮಿಯಂದು ವಿಶೇಷವಾಗಿ ಶಮೀವೃಕ್ಷದ ಪೂಜೆಯನ್ನು ಏರ್ಪಡಿಸಲಾಗಿತ್ತು. ದೇವಾಲಯದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಶಮೀ ವೃಕ್ಷ ಮಂಟಪದ ಹತ್ತಿರ ನೆರವೇರಿಸಲಾಯಿತು. ನವರಾತ್ರಿಯ ಒಂಬತ್ತು ದಿನಗಳಲ್ಲಿ ಆಲಂಬಗಿರಿಯ ದೇವಾಲಯದಲ್ಲಿ ವಿಶೇಷ ಪೂಜಾ ವ್ಯವಸ್ಥೆ, ಭಜನೆ, ಪ್ರವಚನ, ಸಂಕೀರ್ತನೆ ಏರ್ಪಡಿಸಲಾಗಿತ್ತು. ನೂರಾರು ಭಕ್ತರಿಗೆ ವಿಜಯದಶಮಿ ಪ್ರಯುಕ್ತ ಸಿಹಿ ಹಂಚಲಾಯಿತು.

ನವರಾತ್ರಿ ಪ್ರಯುಕ್ತ ವಿಶೇಷ ಭರತನಾಟ್ಯ
ಚಿಂತಾಮಣಿ:
ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಬೆಂಗಳೂರಿನ ಭರತನಾಟ್ಯ ಪ್ರವೀಣೆ ಚೇತನಾ ಸುಂದರೇಶ್ ಅವರ ನೇತೃತ್ವದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಮಹಿಷಾಸುರ ಮರ್ದಿನಿ ನೃತ್ಯ ರೂಪಕ ಪ್ರಸ್ತುತಪಡಿಸಿದರು. ನೆರೆದಿದ್ದ ಭಕ್ತರು ಭರತನಾಟ್ಯದ ಮನಮೋಹಕ ನೃತ್ಯಕ್ಕೆ ಚಪ್ಪಾಳೆಯ ಸುರಿಮಳೆಗೈದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಅತಿಥಿ, ರಾಗವಿ, ಮೃದುಲ, ಸಂಜನಾ, ಅಂಜಿತ, ದೀಪಾ, ಸುಮ ಭಾಗವಹಿಸಿದ್ದರು.
ಹಿರಿಯ ಕಲಾವಿದೆ ಶ್ರೀಮತಿ ಚೇತನಾ ಸುಂದರೇಶ್ ಇದೇ ವೇಳೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಭರತನಾಟ್ಯ ಕಲೆ ಪರಿಚಯಿಸುವ ಉದ್ದೇಶ ನಮ್ಮ ಸಂಸ್ಥೆಯದ್ದಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವುದರ ಜೊತೆಗೆ ಕಲೆಗೆ ಮಾನ್ಯತೆ ನೀಡುತ್ತಿರುವ ನಾದಸುಧಾರಸ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು. ಇದೇ ವೇಳೆ ಕಲಾವಿದರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ನಾದಸುಧಾರಸ ವೇದಿಕೆಯಲ್ಲಿ ಪ್ರತಿನಿತ್ಯ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ಕನಕದಾಸ, ಪುರಂದರದಾಸ ಮತ್ತು ಕೈವಾರ ತಾತಯ್ಯನವರ ಕೀರ್ತನೆಗಳ ಗಾಯನ ನಿರಂತರವಾಗಿ ನಡೆಯುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement