ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೆಡಿಎಸ್ ಮೇಲುಗೈ, ಕಾಂಗ್ರೆಸ್‌ಗೆ ಮುಖಭಂಗ

Srinivasa Murthy VN
Updated On : 16 Oct 2013, 12:28 pm

ಚಿಕ್ಕಬಳ್ಳಾಪುರ: ಇಲ್ಲಿನ ಟಿಎಪಿಸಿಎಂಎಸ್ ಸಂಘದ ಚುನಾವಣೆಯಲ್ಲಿ ಎಲ್ಲಾ 8 ಸ್ಥಾನಗಳನ್ನೂ ಗೆಲ್ಲುವ ಮೂಲಕ ಜೆಡಿಎಸ್ ಮೇಲುಗೈ ಸಾಧಿಸಿದರೆ, ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.
ಕಳೆದ ಕೆಲ ದಿನಗಳಿಂದಲೂ ತೀವ್ರ ಕುತೂಹಲ ಮೂಡಿಸಿದ್ದ ಟಿಎಪಿಸಿಎಂಎಸ್ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು. ಶಾಸಕ ಸುಧಾಕರ್ ಟಿಎಪಿಸಿಎಂಎಸ್ ಹಿಡಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಕಸರತ್ತು ನಡೆಸಿದರೂ ಅವರ ನಿರೀಕ್ಷೆ ತಲೆ ಕೆಳಗಾಗಿದೆ. ಕಾಂಗ್ರೆಸ್ ಬೆಂಬಲಿತ ಎಲ್ಲಾ 8 ಅಭ್ಯರ್ಥಿಗಳು ಜೆಡಿಎಸ್ ವಿರುದ್ಧ ಸೋಲನ್ನೊಪ್ಪಿಕೊಂಡು ಮುಖಭಂಗ ಅನುಭವಿಸಿದ್ದಾರೆ. ಒಟ್ಟು 13 ನಿರ್ದೇಶಕ ಸ್ಥಾನಗಳಲ್ಲಿ ಐದು ಎ ವರ್ಗಕ್ಕೆ ಮತ್ತು 8 ಸ್ಥಾನಗಳು ಬಿ ವರ್ಗಕ್ಕೆ ಸೇರಿವೆ. ಸಹಾಕರ ಸಂಘಗಳಿಂದ ನೇರವಾಗಿ ಎ ವರ್ಗಕ್ಕೆ ನಿರ್ದೇಶಕರನ್ನು ಆಯ್ಕೆ ಮಾಡಿದರೆ, ಬಿ ವರ್ಗದ ನಿರ್ದೇಶಕರನ್ನು ಮತದಾರರು ಚುನಾವಣೆಯಲ್ಲಿ ಆಯ್ಕೆ ಮಾಡುತ್ತಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ 2700ಮಂದಿ ಮತವನ್ನು ಚಲಾಯಿಸಿದ್ದು 8 ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ಸಾಮಾನ್ಯ ವರ್ಗದ ಮೀಸಲಾತಿಯಲ್ಲಿ ಚಂದ್ರಶೇಖರ್ (ಅಜ್ಜವಾರ) 1247 ಮತಗಳು, ರಾಮಚಂದ್ರ (ಚದಲಪುರ) 1181 ಮತಗಳು, ಕೆ.ವಿ. ವಾಸುದೇವ್ (ಕೊಳವನಹಳ್ಳಿ) 1210, ಕೆ.ಎನ್. ಶ್ರೀನಿವಾಸ್ (ಕಣಜೇನಹಳ್ಳಿ)1138, ಮಹಿಳಾ ಮೀಸಲಾತಿಯಿಂದ ಕೌಸಲ್ಯ ಚಂದ್ರಶೇಖರ್(ಚಿಕ್ಕಬಳ್ಳಾಪುರ)1206, ಸಬೀತಾ ಬಾಬು (ನಂದಿ) 1235 ಮತಗಳು, ಹಿಂದುಳಿದ ವರ್ಗದ ಮೀಸಲಾತಿಯಿಂದ ವೆಂಕಟೇಶ್ ೆ(ಎಚ್.ಎಸ್. ಗಾರ್ಡನ್) 1203, ಪರಿಶಿಷ್ಟ ಜಾತಿ ಮೀಸಲಾತಿಯಿಂದ ಹೀರದಿನ್ನಪ್ಪ (ಗುಳ್ಳು)1304 ಮತಗಳನ್ನು ಪಡೆದುಕೊಂಡುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ. ಎ ವರ್ಗಕ್ಕೆ ಮೀಸಲಾಗಿದ್ದ 5 ಸ್ಥಾನಗಳು ಮಾತ್ರ ಕಾಂಗ್ರೆಸ್ ಪಾಲಾಗಿದೆ. ಇನ್ನೂ ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ನಗರದ ಬಿ.ಬಿ. ರಸ್ತೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ, ವಿಧಾನಸಭಾ ಚುನಾವಣೆಯ ನಂತರ ಜೆಡಿಎಸ್‌ಗೆ ಟಿಎಪಿಸಿಎಂಎಸ್ ಚುನಾವಣೆಯು ಹೊಸ ಶಕ್ತಿಯನ್ನು ನೀಡಿದೆ. ಇದನ್ನು ಮುಂದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಮುಂದುವರೆಸಿಕೊಂಡು ಹೋಗಲಾಗುವುದು. ಪಿಎಲ್‌ಡಿ ಬ್ಯಾಂಕ್, ಸಹಾಕಾರಿ ಸಂಘಗಳು, ತಾಪಂ ಮತ್ತು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಜೆಡಿಎಸ್ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದು ಇದೀಗ ಟಿಎಪಿಸಿಎಂಎಸ್ ಜೆಡಿಎಸ್ ತೆಕ್ಕೆಗೆ ಸಿಕ್ಕಿರುವುದು ರೈತರು ತಮ್ಮ ಪಕ್ಷದ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಎತ್ತಿ ತೋರಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕೈನಲ್ಲಿ ಸ್ಪೋಟ: ಟಿಎಪಿಸಿಎಂಎಸ್ ಚುನಾವಣೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಿಸಿದೆ. ಪಕ್ಷದ ಅಭ್ಯರ್ಥಿಗಳ ಸೋಲಿಗೆ ಶಾಸಕ ಸುಧಾಕರ್‌ರವರೇ ನೇರ ಕಾರಣ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಡೇಸ್ ವೆಂಕಟೇಶ್ ಆರೋಪಿಸಿದ್ದಾರೆ.
ಟಿಎಪಿಸಿಎಂಎಸ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮುಖಂಡರ ಅಭಿಪ್ರಾಯವನ್ನು ಪಡೆದುಕೊಳ್ಳದೇ ಶಾಸಕರು ತಮಗೆ ಬೇಕಾದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಕೋಮುವಾದಿ ಪಕ್ಷ ಬಿಜೆಪಿ ಮುಖಂಡರೊಂದಿಗೆ ಕೈ ಜೋಡಿಸಿದರು. ಇದರಿಂದ ಬೇಸತ್ತ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲುವಂತೆ ಮಾಡಿದ್ದಾರೆ. ಇದಕ್ಕೆ ಶಾಸಕರೇ ನೇರ ಹೊಣೆ ಎಂದು ಅವರು ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement