ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಪ್ಪು ಗ್ರಹಿಕೆ: ರಣರಂಗವಾದ ಆಸ್ಪತ್ರೆ

Srinivasa Murthy VN
Updated On : 16 Oct 2013, 12:27 pm

ಚಿಕ್ಕಬಳ್ಳಾಪುರ: ನಗರದ ಹೊರ ವಲಯದಲ್ಲಿರುವ ನೂತನ ಜಿಲ್ಲಾಡಳಿತ ಭವನದ ಸಮೀಪ (ಪೂಜೇನಹಳ್ಳಿ) ಎರಡು ದ್ವಿಚಕ್ರ ವಾಹನಗಳ ನಡುವೆ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸವಾರರಿಬ್ಬರು ಸಾವನ್ನಪ್ಪಿದ್ದು ತಪ್ಪು ಗ್ರಹಿಕೆಯಿಂದ ನಾನಾ ತಿರುವುಗಳನ್ನು ಪಡೆದುಕೊಂಡ ಈ ಪ್ರಕರಣ ಗ್ರಾಮಸ್ಥರ ಪ್ರತಿಭಟನೆ, ವೈದ್ಯರಿಗೆ ಮುತ್ತಿಗೆ, ಪೊಲೀಸರಿಗೆ ಥಳಿತ, ಕಲ್ಲು ತೂರಾಟದಂತಹ ಘಟನೆಗಳಿಗೆ ಕಾರಣವಾಗಿ ಕೆಲ ಸಮಯ ಉದ್ರಿಕ್ತ ವಾತಾವರಣ ನಿರ್ಮಾಣ ಮಾಡಿತು.
ತಾಲೂಕಿನ ಅಜ್ಜವಾರ ಗ್ರಾಮದ ಡಿಪ್ಲೋಮಾ ಅಂತಿಮ ವರ್ಷದ ವಿದ್ಯಾರ್ಥಿ ರಾಕೇಶ್ (19) ಮತ್ತು ಶಿಡ್ಲಘಟ್ಟ ಪ್ರಗತಿ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ ಅನಂತ ರಾಜು( 23) ಮೃತ ದುರ್ದೈವಿಗಳು.
ಘಟನೆಯ ಹಿನ್ನೆಲೆ: ಅಜ್ಜವಾರ ಗ್ರಾಮದಿಂದ ಚಿಕ್ಕಬಳ್ಳಾಪುರದ ಕಡೆಗೆ ರಾಕೇಶ್, ಇದಕ್ಕೆ ವಿರುದ್ಧವಾಗಿ ಚಿಕ್ಕಬಳ್ಳಾಪುರ ನಗರದಿಂದ ಶಿಡ್ಲಘಟ್ಟ ಕಡೆಗೆ ಆನಂತ ರಾಜು  ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಇವರಿಬ್ಬರು ಪೂಜೇನಹಳ್ಳಿ ಗ್ರಾಮದ ಬಳಿಗೆ ಬರುತ್ತಿದ್ದಂತೆ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
 ಈ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ರಾಕೇಶ್ ಮತ್ತು ಅನಂತರಾಜುರನ್ನು ಗ್ರಾಮಸ್ಥರು ತಕ್ಷಣ ಸಮೀಪದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಆದರೆ, ರಾಕೇಶ್ ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಮೃತಪಟ್ಟಿದ್ದು ಇನ್ನೂ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮಾರ್ಗ ಮಧ್ಯೆ ಆನಂತರಾಜು ಸಾವನ್ನಪ್ಪಿದ್ದಾರೆ.
ಪೊಲೀಸರಿಗೇ ಥಳಿತ: ಗ್ರಾಮಸ್ಥರು ರಾಕೇಶ್ ಮತ್ತು ಅನಂತರಾಜುರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಂತೆ ಚಿಕಿತ್ಸೆ ನೀಡಲು ಮುಂದಾದ ಆಸ್ಪತ್ರೆಯ ವೈದ್ಯರು ಆ ವೇಳೆಗಾಗಲೇ ರಾಕೇಶ್ ಸಾವನ್ನಪ್ಪಿರುವುದನ್ನು ಖಾತ್ರಿಪಡಿಸಿಕೊಂಡು ಮತ್ತೊಬ್ಬ ಗಾಯಾಳು ಆನಂತರಾಜುಗೆ ಸೂಕ್ತ ಚಿಕಿತ್ಸೆ ನೀಡುವುದರತ್ತ ಗಮನಹರಿಸಿದ್ದಾರೆ. ಇದನ್ನು ತಪ್ಪಾಗಿ ತಿಳಿದುಕೊಂಡ ಗ್ರಾಮಸ್ಥರು, ಆನಂತರಾಜುಗೆ ಮಾತ್ರ ಚಿಕಿತ್ಸೆ ಕೊಡಲಾಗುತ್ತಿದೆ. ರಾಕೇಶ್ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ವೈದ್ಯರೊಂದಿಗೆ ಮಾತಿನ ಚಕಮಕಿ ನಡೆಸಿದರು. ಆಗ ವೈದ್ಯರು ರಾಕೇಶ್ ಈಗಾಗಲೇ ಮೃತಪಟ್ಟಿದ್ದಾನೆ ಎಂದು ತಿಳಿಸುತ್ತಿದ್ದಂತೆ ಜನರು ಮತ್ತಷ್ಟು ಆಕ್ರೋಶಗೊಂಡು ಗಲಾಟೆ ಮಾಡಿದ್ದಾರೆ.ಅಪಘಾತ ಸಂಭವಿಸಿದ ತಕ್ಷಣ ದೂರವಾಣಿ ಕರೆ ಮಾಡಿ ತಿಳಿಸಿದರೂ ಆಸ್ಪತ್ರೆಯ ಆ್ಯಂಬುಲೆನ್ಸ್ ಬೇಗ ಬರಲಿಲ್ಲ. ಇದರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಲ್ಲಿ ವಿಳಂಬವಾಯಿತು. ಅಲ್ಲದೇ ಆಸ್ಪತ್ರೆಗೆ ಬಂದ ತಕ್ಷಣ ವೈದ್ಯರು ಸರಿಯಾದ ಚಿಕಿತ್ಸೆ ಕೊಡಲಿಲ್ಲ. ಇದರಿಂದ ರಾಕೇಶ್ ಸಾವಿಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯೇ ಕಾರಣ ಎಂದು ಆರೋಪಿಸಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾದರು. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಸಶಸ್ತ್ರ ಮೀಸಲು ಪಡೆಯೊಂದಿಗೆ ಆಸ್ಪತ್ರೆಗೆ ಧಾವಿಸಿ ಬಂದಿದ್ದು ಇಲ್ಲೂ ಉಂಟಾದ ತಪ್ಪು ಗ್ರಹಿಕೆಯಿಂದ ಗಲಾಟೆ ಮತ್ತಷ್ಟು ವಿಕೋಪಕ್ಕೆ ತಿರುಗಿತು.

ಮೃತನ ತಂದೆ ಮೇಲೆ ಹಲ್ಲೆ
ಪ್ರತಿಭಟನಾಕಾರರಲ್ಲೊಬ್ಬ ಆಸ್ಪತ್ರೆಯ ವೈದ್ಯರನ್ನು ನಿಂದಿಸುವುದರ ಜತೆಗೆ ಎಲ್ಲಾ ಘಟನೆ ಮುಗಿದು ಹೋದ ಮೇಲೆ ಬರುತ್ತಾರೆ ಎಂದು ಪೊಲೀಸರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ. ಹೀಗೆ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿರುವುದನ್ನು ಮನಗಂಡು ಪೊಲೀಸರು ಕೊನೆಗೆ ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಲು ಮುಂದಾಗಿದ್ದು ಈ ನಡುವೆ ತನ್ನ ಮಗನ ಸಾವಿನಿಂದ ದುಃಖದಲ್ಲಿ ಒಂದು ಕಡೆ ಕುಳಿತಿದ್ದ ರಾಕೇಶ್ ತಂದೆ ನಾರಾಯಣಸ್ವಾಮಿಗೆ ಮುಖ್ಯಪೇದೆ ವೆಂಕಟೇಶ್ ಮತ್ತಿತರರು ಹೊಡೆದಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮುಖ್ಯಪೇದೆ ವೆಂಕಟೇಶ್ ಅವರನ್ನು ಥಳಿಸಿದರಲ್ಲದೇ ರಕ್ಷಣೆಗೆ ಬಂದ ಸಬ್ ಇನ್ಸ್ ಪೆಕ್ಟರ್ ಶಿವಸ್ವಾಮಿ ಸೇರಿದಂತೆ ಇತರೆ ಪೊಲೀಸರನ್ನು ಎಳೆದಾಡಿದ್ದಾರೆ. ಉದ್ರಿಕ್ತ ಜನರ ಮಧ್ಯೆಯಿಂದ ಮುಖ್ಯಪೇದೆಯನ್ನು ಹೊರಗೆ ಕರೆದುಕೊಂಡು ಬಂದು ಪೊಲೀಸ್ ವ್ಯಾನಿಗೆ ಹತ್ತಿಸಿ ಕಾಪಾಡಲು ಪೊಲೀಸರು ಹರಸಾಹಸವನ್ನೇ ಮಾಡಬೇಕಾಯಿತು. ಇಷ್ಟಾದರೂ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ ಸಶಸ್ತ್ರ ಮೀಸಲು ಪಡೆಯ ವಾಹನಗಳ ಗಾಜುಗಳನ್ನು ಪುಡಿಪುಡಿ ಮಾಡಿದರು. ಕೊನೆಗೆ ಡಿವೈಎಸ್‌ಪಿದೇವಯ್ಯ ನೇತ್ಯತ್ವದಲ್ಲಿ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಶಾಸಕ ಡಾ.ಕೆ. ಸುಧಾಕರ್ ಸ್ಥಳಕ್ಕೆ ಆಗಮಿಸಿ ಜನರನ್ನು ಸಮಾಧಾನಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement