ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಂದಿದೆ ಘನತ್ಯಾಜ್ಯ ಪುಡಿ ಮಾಡುವ ಯಂತ್ರ

Srinivasa Murthy VN
Updated On : 16 Oct 2013, 12:28 pm

ಕಪ್ರ ವಾರ್ತೆ, ಕೋಲಾರ, ಅ.15
ನಗರದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಜಮೀನು ಹುಡುಕಲು ಆಗದಿದ್ದರೂ ಗಟ್ಟಿ ಘನತ್ಯಾಜ್ಯಗಳನ್ನು ಪುಡಿ ಮಾಡಬಲ್ಲ ಯಂತ್ರವನ್ನು ನಗರಸಭೆ ತರಿಸಿಕೊಳ್ಳುವಲ್ಲಿ ಸಫಲವಾಗಿದೆ.
ಕಳೆದ ವಾರ ಈ ಯಂತ್ರವನ್ನು ಬೆಳಗಾವಿಯಿಂದ ತರಿಸಲಾಗಿದ್ದು ಸೂಕ್ತ ಜಾಗವಿಲ್ಲದ ಕಾರಣ ಯಂತ್ರವನ್ನು ಅಳವಡಿಸಲು ಆಗಿಲ್ಲ. ಇದರಿಂದಾಗಿ ಸದರಿ ಯಂತ್ರ ಬಿಸಲು, ಮಳೆಯಿಂದ ರಕ್ಷಣೆ ಪಡೆಯಲಾಗುತ್ತಿಲ್ಲ, ನೆಲದ ಮೇಲೆ ಯಂತ್ರ ಇಟ್ಟಿರುವುದರಿಂದ ತುಕ್ಕು ಹಿಡಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಪರಿಸರ ಮಾಲಿನ್ಯ ಇಲಾಖೆಯವರು ಈ ಯಂತ್ರವನ್ನು ನಗರಸಭೆಗೆ ನೀಡಿದ್ದಾರೆನ್ನಲಾಗಿದೆ. ಕೊಪ್ಪಳದಲ್ಲಿ ಗಟ್ಟಿ ಘನತ್ಯಾಜ್ಯಗಳನ್ನು ಪುಡಿ ಮಾಡಿ ಕಾಂಪೋಸ್ಟ್ ಗೊಬ್ಬರವನ್ನು ರೈತರಿಗೆ ನೀಡುವ ಉದ್ದೇಶ ಹೊಂದಲಾಗಿದೆ.
ಈ ಯಂತ್ರವನ್ನು ಹೆಚ್ಚು ಕಸ ಸಂಗ್ರಹಣೆಯಾಗುವ ಪ್ರದೇಶ ಇಲ್ಲವೇ ಸೂಕ್ತವಾದ ಜಾಗದಲ್ಲಿ ಅಳವಡಿಸಿ ಗಟ್ಟಿ ಕಸವನ್ನು ಪುಡಿ ಮಾಡಿ ನಂತರ ಗೊಬ್ಬರನ್ನು ರೈತರಿಗೆ ನೀಡಲಾಗುತ್ತದೆ, ಈ ಪ್ರಯೋಗ ಕೊಪ್ಪಳದಲ್ಲಿ ಯಶಸ್ವಿಯಾಗಿರುವುದರಿಂದ ಇದಕ್ಕೆ ಕೊಪ್ಪಳ ಮಾದರಿ ಯಂತ್ರ ಎಂದು ಹೆಸರಿಡಲಾಗಿದೆ.
ಕಳೆದ ವಾರವೇ ಯಂತ್ರ ಬಂದಿದ್ದರೂ ನಗರದಲ್ಲಿ ಸುರಿದ ಮಳೆಯಿಂದ ರಾಜ ಕಾಲುವೆ, ಚರಂಡಿಗಳ ಸ್ವಚ್ಛತಾ ಕಾರ್ಯದಲ್ಲಿ ಅಧಿಕಾರಿಗಳು ಮಗ್ನರಾಗಿರುವುದರಿಂದ ಯಂತ್ರದ ಕಡೆ ಗಮನ ನೀಡಲಾಗುತ್ತಿಲ್ಲ ಎನ್ನಲಾಗಿದೆ. ಯಂತ್ರ ತಯಾರಿಕಾ ಘಟಕದವರು ಪ್ರಾತ್ಯಕ್ಷಿಕೆ ನೀಡಿದ ನಂತರ ಯಂತ್ರವನ್ನು ಸೂಕ್ತವಾದ ಜಾಗದಲ್ಲಿ ಅಳವಡಿಸಿ ಗಟ್ಟಿಘನತ್ಯಾಜ್ಯವನ್ನು ಪುಡಿ ಮಾಡಲಾಗುತ್ತದೆ. ಜೊತೆಗೆ ಪ್ಲಾಸ್ಟಿಕ್, ಗಾಜು ಇನ್ನಿತರ ತ್ಯಾಜ್ಯಗಳನ್ನು ವಿಂಗಡಣೆ ಮಾಡುವ ಯಂತ್ರವನ್ನು ಸಹ ಖರೀದಿ ಮಾಡಿ ತ್ವರಿತಗತಿಯಲ್ಲಿ ಕಸವನ್ನು ವಿಲೇವಾರಿ ಮಾಡುವುದಕ್ಕೆ ಚಿಂತನೆ ನಡೆದಿದೆ ಎಂದು ನಗರಸಭೆ ಆಯುಕ್ತರಾದ ಜಗದೀಶ್ ಕನ್ನಡಪ್ರಭಕ್ಕೆ ತಿಳಿಸಿದರು.
ಯಂತ್ರವನ್ನು ನಗರಸಭೆ ಆವರಣದಲ್ಲಿ ಇರಿಸಲಾಗಿದ್ದು ಆರೋಗ್ಯ ನಿರೀಕ್ಷಕರಿಗೆ ತಿಳಿಸಿ ಯಂತ್ರವನ್ನು ಜೋಪಾನ ಮಾಡಲಾಗುವುದೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement