ಮಾಜಿ ಶಾಸಕರ ವಿರುದ್ಧ ದೂರು
ಕೆಜಿಎಫ್: ಇತ್ತೀಚೆಗೆ ನಡೆದಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕರಾದ ಎಂ. ಭಕ್ತವತ್ಸಲಂ ಹಾಗೂ ಎಸ್. ರಾಜೇಂದ್ರನ್ ಅವರು ಕೆಜಿಎಫ್ ಕ್ಷೇತ್ರದ ಹಾಲಿ ಶಾಸಕಿ ವೈ. ರಾಮಕ್ಕ ಹಾಗೂ ಮಾಜಿ ಶಾಸಕ ವೈ. ಸಂಪಂಗಿ ಅವರ ವಿರುದ್ದ ಅವಹೇಳನಾಕಾರಿ ಶಬ್ದಗಳನ್ನು ಬಳಸಿದ್ದು ಇದರಿಂದ ನೋವನ್ನುಂಟು ಮಾಡಿರುವ ಮಾಜಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬಿಜೆಪಿ ಅಧ್ಯಕ್ಷ ಸುರೇಶ್ ನಾರಾಯಣಕುಟ್ಟಿ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿಕಟೋಚ್ ಸೆಫಟ್ ಅವರಿಗೆ ದೂರನ್ನು ಸಲ್ಲಿಸಿದರು. ಇತ್ತೀಚೆಗೆ ಹೆನ್ರೀಸ್ ಬಡಾವಣೆಯಲ್ಲಿ ನಡೆದಂತಹ ಖಾಸಗಿ ಸಭೆಯಲ್ಲಿ ಭಾಗವಹಿಸಿದ ಮಾಜಿ ಶಾಸಕರಾದ ಎಂ. ಭಕ್ತವತ್ಸಲಂ ಹಾಗೂ ಎಸ್. ರಾಜೇಂದ್ರನ್ ಸಭೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಕೆಜಿಎಫ್ ಕ್ಷೇತ್ರದ ಶಾಸಕಿ ವೈ. ರಾಮಕ್ಕ ಹಾಗೂ ಮಾಜಿ ಶಾಸಕ ವೈ. ಸಂಪಂಗಿ ಅವರ ವಿರುದ್ಧ ದುರ್ಭಾಷೆ ಪದಗಳನ್ನು ಉಪಯೋಗಿಸಿದ್ದು ಕ್ಷೇತ್ರದ ಲಕ್ಷಾಂತರ ಜನರಿಗೆ ಅಪಮಾನ ಮತ್ತು ನೋವನ್ನುಂಟುಮಾಡಿದ್ದಾರೆ ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಈ ವೇಳೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್ ಅವರು ದೂರನ್ನು ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.