ಸಮಾರಂಭದಲ್ಲಿ ಊಟ ಸೇವಿಸಿದ್ದ 50 ಜನ ಅಸ್ವಸ್ಥ
ಕೋಲಾರ: ಹೊಸ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ಊಟ ಮಾಡಿದ ಸುಮಾರು 50 ಜನರು ವಾಂದಿ ಬೇಧಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಆಲೇರಿ ಗ್ರಾಮದಲ್ಲಿ ನಡೆದಿದೆ.
ಆಲೇರಿ ಗ್ರಾಮದ ನಾರಾಯಣಸ್ವಾಮಿ ಎಂಬವರ ಮನೆಯಲ್ಲಿ ಸೋಮವಾರ ಗೃಹ ಪ್ರವೇಶ ಸಮಾರಂಭವಿತ್ತು. ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಬಂಧುಗಳು ಬಂದಿದ್ದರು.
ಕಾರ್ಯಕ್ರಮಕ್ಕೆ ಬಂದವರಿಗೆ ಸೋಮವಾರ ಬೆಳಿಗ್ಗೆಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಂತರ ಊಟ ಮಾಡಿದ ಕೆಲವರು ರಾತ್ರಿ ಹನ್ನೊಂದು ಗಂಟೆಯ ಬಳಿಕ ಹೊಟ್ಟೆ ನೋವು, ವಾಂದಿ ಬೇಧಿಯಿಂದ ಅಸ್ವಸ್ಥರಾದರು. ಕೂಡಲೇ ರೋಗಿಗಳನ್ನು ವಾಹನಗಳಲ್ಲಿ ಕೋಲಾರದ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆ ಮತ್ತು ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದು ಯಾವುದೇ ಪ್ರಾಣಾಪಾಯವಿಲ್ಲ ರೋಗಿಗಳ ಕಡೆಯವರು ಹಾಗೂ ವೈದ್ಯರು ತಿಳಿಸಿದ್ದಾರೆ.
ಗೃಹ ಪ್ರವೇಶಕ್ಕೆಂದು ಸೋಮವಾರ ಮುಂಜಾನೆಯಿಂದಲೂ ನೂರಾರು ಜನರು ಬಂದು ಹೋಗಿದ್ದಾರೆ ಆ ಪೈಕಿ 800-1000 ಜನರು ಊಟ ಮಾಡಿದ್ದಾರೆ. ಆದ್ರೆ ಸಂಜೆ ನಂತರ ಊಟ ಮಾಡಿದ ಗ್ರಾಮಸ್ಥರು ಹಾಗೂ ಮನೆಯರು ವಾಂತಿ ಬೇಧಿಯಿಂದ ಅಸ್ವಸ್ಥಗೊಂಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಕೋಲಾರ ಹಾಗೂ ನರಸಾಪುರಗಳಿಂದ 108 ಆ್ಯಂಬುಲೆನ್ಸ್ ಹಾಗೂ ಗ್ರಾಮದಲ್ಲಿದ್ದ ವಾಹನಗಳಲ್ಲಿ ಅಸ್ವಸ್ಥಗೊಂಡವರನ್ನು ಮಧ್ಯರಾತ್ರಿಯೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ.
ಅಸ್ವಸ್ಥಗೊಂಡವರಲ್ಲಿ 25 ಕ್ಕೂ ಮಹಿಳೆಯರು ಹದಿನೈದಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆಂದು ಗ್ರಾಮದ ನಿವಾಸಿ ಶ್ರೀನಿವಾಸ್ ಎಂಬವರು ತಿಳಿಸಿದ್ದಾರೆ.
20ಕ್ಕೆ ದಸರಾ ಕವಿಗೋಷ್ಠಿ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಕವಿಗೋಷ್ಠಿಯ ರೂವಾರಿ ಬೀರಮಾನಹಳ್ಳಿ ರಾಮಕೃಷ್ಣ ಅವರ ಸ್ಮರಣಾರ್ಥ ದಸರಾ ಕವಿಗೋಷ್ಠಿಯನ್ನು ಅ.20 ಭಾನುವಾರ, ಬೆಳಗ್ಗೆ 11.30ಕ್ಕೆ ಪಟ್ಟಣದ ಅಂಜನಿ ಬಡಾವಣೆಯಲ್ಲಿರುವ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ವೇದಿಕೆಯ ಕಾರ್ಯದರ್ಶಿ ಕೆ.ಎಸ್.ನೂರುಲ್ಲಾ ತಿಳಿಸಿದ್ದಾರೆ.