ಇಂದು ವಾಲ್ಮೀಕಿ ಜಯಂತಿ
ಚಿಂತಾಮಣಿ: ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಕಿರಿಯ, ಹಿರಿಯ ಪ್ರೌಢಶಾಲಾ ಮುಖ್ಯ ಶಿಕ್ಷಕರು ಅ.18 ರಂದು ಶುಕ್ರವಾರ ಬೆಳಗ್ಗೆ 9 ಗಂಟೆ ಒಳಗೆ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಆಯಾ ಶಾಲೆಗಳಲ್ಲಿ ಅರ್ಥಪೂರ್ಣವಾಗಿ ಕಡ್ಡಾಯವಾಗಿ ಆಚರಣೆ ಮಾಡಿ, ವರದಿಯನ್ನು ಸಿ.ಆರ್.ಪಿ ಸಂಯೋಜಕರಿಗೆ ನೀಡಲು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ಪತ್ರಿಕಾ ಪ್ರಕಟಣೆಯಲ್ಲಿ ಶಿಕ್ಷಕರಿಗೆ ಮನವಿ ಮಾಡಿದ್ದಾರೆ.
ವಾಲ್ಮೀಕಿ ಜಯಂತಿ
ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅ.18 ರಂದು ಬೆಳಗ್ಗೆ 11 ಗಂಟೆಗೆ ಮಹರ್ಷಿ ವಾಲ್ಮೀಕಿ ಜಯಂತಿ ಆಯೋಜಿಸಲಾಗಿದೆ. ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಚಿವ ಡಾ.ಎಂ. ವೀರಪ್ಪ ಮೊಯಿಲಿ ನೆರವೇರಿಸುವರು.
ಇಂದು 90 ನೇ ಹುಣ್ಣಿಮೆ ಹಾಡು
ಕೋಲಾರ: ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿರುವ ಆದಿಮ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ 6.30ಕ್ಕೆ 90ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಆಲನಹಳ್ಳಿ ಸಾಹಿತ್ಯ ಸಪ್ತಾಹ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಯುಕ್ತ ಕವಿ, ಕಲಿ ಅಥವಾ ಭುಕ್ಕುಂಡ, ಭೂಕುಂಡ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಆದಿಮ ಸಂಸ್ಥೆಯ ವ್ಯವಸ್ಥಾಪಕ ಟ್ಪಸ್ಟಿ, ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ತಿಳಿಸಿದ್ದಾರೆ.
ಬಾಣಂತಿ ಕೆರೆ ಒತ್ತುವರಿ ತೆರವಿಗೆ ಆಗ್ರಹ
ಕೋಲಾರ: ನಗರಕ್ಕೆ ಸುಮಾರು 3 ಕಿಮೀ ದೂರದ ಅಂತರಗಂಗೆ ಬೆಟ್ಟದ ತಪ್ಪಲಲ್ಲಿರುವ ಬಾಣಂತಿ ಕೆರೆ ಹಾಗೂ ಕರಗದ ಬಾವಿಯ ಒತ್ತುವರಿ ತೆರವುಗೊಳಿಸುವಂತೆ ನಗರಸಭಾ ಸದಸ್ಯ ಕಾಶಿ ವಿಶ್ವನಾಥ್ ನೇತೃತ್ವದಲ್ಲಿ ಕೀಲುಕೋಟೆಯ ಯುವಕರು ಜಿಲ್ಲಾಧಿಕಾರಿಗಳನ್ನು ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಅಂತರಗಂಗೆ ಬೆಟ್ಟದಿಂದ ಬರುವ ನೀರು ಮೊದಲಿಗೆ ತಪ್ಪಲಲ್ಲಿರುವ ಪುರಾತನ ಬಾಣಂತಿ ಕೆರೆಯಲ್ಲಿ ಶೇಖರವಾಗಿ ನಂತರ ಪೋಷಕ ಕಾಲುವೆಗಳ ಮೂಲಕ ಹಾದು ಕೋಲಾರಮ್ಮ ಕೆರೆ ಸೇರುತ್ತದೆ ಎಂದು ತಿಳಿಸಿದರು. ಈ ಕೆರೆಯನ್ನು ಕೆಲವು ಮಂದಿ ಒತ್ತುವರಿ ಮಾಡಿಕೊಂಡಿರುವುದರಿಂದಾಗಿ ಕೋಲಾರಮ್ಮ ಅಮಾನಿ ಕೆರೆಯ ಪೋಷಕ ಕಾಲುವೆಗೆ ನೀರು ಬರುತ್ತಿಲ್ಲ ಎಂದು ದೂರಿದರು. ಹಿಂದೆಯೂ ಈ ಕೆರೆ ಹಾಗೂ ಪಕ್ಕದಲ್ಲೇ ಇರುವ ಕರಗದ ಬಾಯಿಯ ಪ್ರದೇಶದ ಒತ್ತುವರಿ ತೆರವುಗೊಳಿಸುವಂತೆ ಕೋರಲಾಗಿತ್ತಾದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿಸಿದರು. ಈ ಕೆರೆ ಒತ್ತುವರಿಯಿಂದಾಗಿಯೇ ಬೆಟ್ಟದ ಮೇಲಿನ ನೀರು ನೇರವಾಗಿ ನಗರದ ಕೆಲವು ಪ್ರದೇಶಗಳ ಮೇಲೆ ನುಗ್ಗಿ ಮನೆಗಳು ಜಲಾವೃತಗೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಇದೀಗ ಅಂತರಗಂಗೆ ಕಡೆಯಿಂದ ಬರುವ ಕೋಲಾರಮ್ಮ ಪೋಷಕ ಕಾಲುವೆಯ ಹೂಳು ತೆಗೆದು, ಕಾಲುವೆಗಳ ಒತ್ತುವರಿ ತೆರವು ಕೆಲಸ ಆರಂಭಿಸಲಾಗಿದ್ದು. ಈ ಕಾಮಗಾರಿಯ ಮುಂದುವರೆದ ಭಾಗವಾಗಿ ಬಾಣಂತಿ ಕೆರೆ ಒತ್ತುವರಿ ತೆರವುಗೊಳಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಕೀಲ ನರಸಿಂಹಮೂರ್ತಿ, ನರೇಶ್, ರವಿ, ಸಾಗರ್ ಹಾಜರಿದ್ದರು.
ರಾಜ ಕಾಲುವೆ ಒತ್ತುವರಿಗೆ ರೈತ ಸಂಘ ಖಂಡನೆ
ಕೋಲಾರ: ತಾಲೂಕಿನ ನರಸಾಪುರ ಹೋಬಳಿಯ ಜೋಡಿ ಕೃಷ್ಣಪುರದ ಬಳಿ ಬಂಡೋ ಕಂಪನಿಗೆ ರೈತರ ಜಮೀನನ್ನು ನೀಡಲಾಗಿದ್ದು ಈ ಖಾಸಗಿ ಕಂಪನಿಯ ಮಾಲೀಕರು ಜೋಡಿ ಕೃಷ್ಣಾಪುರ ಕೆರೆಯ ನೀರು ಹರಿದು ಹೋಗುವ ರಾಜ ಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದಾರೆಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ. ರಾಜ ಕಾಲುವೆ ಒತ್ತುವರಿ ಮಾಡಿರುವುದನ್ನು ಖಂಡಿಸಿರುವ ಮುಖಂಡರು, ಕಾಲುವೆಯ ಒತ್ತುವರಿ ತೆರವುಗೊಳಿಸಿ ಕಂಪನಿಯ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಜೋಡಿ ಕೃಷ್ಣಾಪುರದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದ ಇತ್ತೀಚೆಗೆ ಬಿದ್ದ ಮಳೆಯ ನೀರು ಹರಿಯಲಾಗದೆ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಬೆಳೆ ನಾಶವಾಗಿದೆ, ಅಧಿಕಾರಿಗಳು ಅಕ್ರಮ ಗೊತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆಂದು ದೂರಿದ್ದಾರೆ. ಬೆಳೆ ನಷ್ಟವಾದ ರೈತರ ಜಮೀನುಗಳಿಗೆ ರಾಜ್ಯ ಸಂಚಾಲಕ ಹೂಹಳ್ಳಿನಾಗರಾಜ್, ನರಸಾಪುರ ಪುರುಷೋತ್ತಮ್, ಅಪ್ಪಸಂದ್ರ ರಾಮು, ಗೋಪಾಲ್, ಆಂಜಿನಪ್ಪ, ಆರ್. ಮಂಜುನಾಥ್, ವೆಂಕಟರಾಮ್, ವೇಮಗಲ್ ಆಮರನಾರಾಯಣಸ್ವಾಮಿ, ಗಣೇಶ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾ ಸಂಘಟನಾ ಸಂಚಾಲಕ ಕೆ. ಶ್ರೀನಿವಾಸಗೌಡ ಭೇಟಿ ನೀಡಿ ಖಾಸಗಿ ಕಾರ್ಖಾನೆಯ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಯನ ಪ್ರವಾಸಕ್ಕೆ ಬೀಳ್ಕೊಡುಗೆ
ಮುಳಬಾಗಲು: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಮುಳಬಾಗಲು ತಾಲೂಕಿನ 49 ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರನ್ನು ಮಹಾರಾಷ್ಟ್ರ ಕೊಲ್ಲಾಪುರ ಗೋಕುಲ್ ಡೈರಿ ಅಧ್ಯಯನ ಪ್ರವಾಸಕ್ಕೆ ಹಾಲು ಒಕ್ಕೂಟದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಶುಭ ಹಾರೈಸಿ ಬಿಳ್ಕೋಟ್ಟರು.