ಪಿಡಿಒ ನೇಮಕಕ್ಕೆ ಒತ್ತಾಯಿಸಿ ತಾಪಂಗೆ ಮುತ್ತಿಗೆ
ಕೋಲಾರ: ತಾಲೂಕಿನ ಮಾರ್ಜೇನಹಳ್ಳಿ ಗ್ರಾಪಂಗೆ ಕಳೆದ ಮೂರು ತಿಂಗಳಿಂದ ಅಭಿವೃದ್ಧಿ ಅಧಿಕಾರಿ ಇಲ್ಲದಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಗುರುವಾರ ಕೋಲಾರ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಾರ್ಜೇನಹಳ್ಳಿ ಗ್ರಾಪಂನಲ್ಲಿ ನರೇಗಾ ಕೆಲಸಗಳು ಕುಂಠಿತಗೊಂಡು ಶೂನ್ಯ ಸಾಧನೆ ದಾಖಲೆ ಆಗಿರುವುದಕ್ಕೆ ಗ್ರಾಪಂಗೆ ಪಿಡಿಒ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ, ಕೋಲಾರ ತಾಪಂ ಇಒ ಕೆ.ಎಸ್. ಭಟ್ ಅವರು ಪಿಡಿಒ ನೇಮಕಕ್ಕೆ ಕ್ರಮ ಜರುಗಿಸದಿರುವುದರಿಂದ ಅನೇಕ ಅಭಿವೃದ್ಧಿ ಕೆಲಸಗಳು ಅನುಷ್ಠಾನಕ್ಕೆ ತರಲಾಗಿಲ್ಲವೆಂದು ಗ್ರಾಪಂ ಸದಸ್ಯ ಕೆ.ಎಂ. ರವಿಚಂದ್ರೇಗೌಡ ದೂರಿದರು.
ಗ್ರಾಪಂಗೆ ಇಬ್ಬರು ಕಾರ್ಯದರ್ಶಿಗಳಿದ್ದಾರೆ, ಒಬ್ಬರು ಕಳೆದ ಆರು ತಿಂಗಳಿಂದ ಮತ್ತೊಬ್ಬರು 15 ದಿನಗಳಿಂದ ಕಚೇರಿಗೆ ಬಂದು ಹಾಜರಾತಿ ದಾಖಲು ಮಾಡುತ್ತಿದ್ದಾರೆಯಾದರೂ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಆಗುತ್ತಿಲ್ಲ, ಪಂಚಾಯಿತಿಗೆ ಒಬ್ಬರು ಮಾತ್ರ ಕಾರ್ಯದರ್ಶಿ ಇರಬೇಕು. ಆದರೆ,ನಮ್ಮ ಪಂಚಾಯಿತಿಗೆ ಇಬ್ಬರು ವರ್ಗಾವಣೆಯಾಗಿರುವುದು ಅಚ್ಚರಿ ಮೂಡಿಸಿದೆ, ಇದಕ್ಕೆಲ್ಲಾ ಕೋಲಾರ ತಾಪಂ ಇಒ ಅವರ ಬೇಜಾವಾಬ್ದಾರಿತನವೇ ಕಾರಣವೆಂದು ಆರೋಪಿಸಿದರು.
ತಾಪಂ ಇಒರವರು ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಂಡು ಸ್ವಹಿತಕ್ಕಾಗಿ ಬಳಕೆ ಮಾಡುತ್ತಿದ್ದಾರೆ, ನರೇಗಾ ಕೆಲಸ ಯಾವುದು ನಡೆಯುತ್ತಿಲ್ಲ, ಚುನಾಯಿತ ಜನಪ್ರತಿನಿಧಿಗಳಿಗೆ ಜನತೆ ಛೀಮಾರಿ ಹಾಕುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಜಿಪಂ ಸಿಇಒ ಅಥವಾ ಜಿಲ್ಲಾಧಿಕಾರಿಗಳು ಗಮನ ನೀಡದಿದ್ದರೆ ಪಂಚಾಯಿತಿಯು ಮತ್ತಷ್ಟು ಅಧೋಗತಿಗೆ ಇಳಿಯುತ್ತದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಸದಸ್ಯರಾದ ರವಿಚಂದ್ರೇಗೌಡ, ಸಯ್ಯದ್ ವಾಜೀದ್ ಪಾಷ, ಶಂಕರ್, ನಾರಾಯಣಸ್ವಾಮಿ, ಎಲವಾರದ ಚಿಕ್ಕಮುನಿಸ್ವಾಮಿ, ಜ್ಯೋತಿ ಚಂದ್ರ, ರಾಜೇಶ್ವರಿ ಮಂಜುನಾಥ್, ಸುಜಾತ ರಂಗೇಶ್ ಇದ್ದರು.