ಶ್ರೀಗಂಧ ಕಳ್ಳನ ಬಂಧನ
ಚಿಂತಾಮಣಿ: ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಮಾರಾಟ ಮಾಡಲು ಯತ್ನಿಸಿದ 3 ಜನ ಆರೋಪಿಗಳಲ್ಲಿ ಒಬ್ಬನ್ನನು ಬಂಧಿಸಿರುವ ಪೊಲೀಸರು ಆರೋಪಿಯಿಂದ 10 ಕೆಜಿಗೂ ಹೆಚ್ಚು ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮೇಪಲ್ಲಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ತಮ್ಮೇಪಲ್ಲಿ ಗ್ರಾಮದ ರೈತ ಕೋನಪ್ಪರೆಡ್ಡಿ ಬಿನ್ ರಾಮರೆಡ್ಡಿ ಎಂಬವರಿಗೆ ಸೇರಿದ ಸರ್ವೇ ನಂ.97 ಜಮೀನನಲ್ಲಿ ಶ್ರೀಗಂಧ ಮರಗಳಿದ್ದು, ರಾತ್ರಿ ವೇಳೆ ಅಕ್ರಮವಾಗಿ ಕಟಾವು ಮಾಡಿದ ಇದೇ ಗ್ರಾಮದ ಆರೋಪಿಗಳಾದ ಮುನಿರಾಜು,ನರಸಿಂಹಪ್ಪ, ವೆಂಕಟೇಶ್ ಎಂಬ ಮೂರು ಜನರ ಪೈಕಿ ಮುನಿರಾಜುವನ್ನು ಬಂಧಿಸಿ ಸಾವಿರಾರು ರು. ಮೌಲ್ಯದ ಗಂಧದ ತುಂಡುಗಳನ್ನು ಸಬ್ಇನ್ಸ್ಪ್ಪೆಕ್ಟರ್ ರಾಘವೇಂದ್ರ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಮತ್ತಿಬ್ಬರು ಆರೋಪಿಗಳಾದ ನರಸಿಂಹಪ್ಪ ಮತ್ತು ವೆಂಕಟೇಶ ಎಂಬವರು ತಲೆ ಮರಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.
ಬಸ್ ಹರಿದು ವಕೀಲ ಸಾವು
ಚಿಂತಾಮಣಿ: ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಕೆಳಗೆ ಬಿದ್ದು, ಆತನ ಮೇಲೆ ಬಸ್ ಹಾದು ಹೋಗಿ ಮೃತಪಟ್ಟಿರುವ ದಾರುಣ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈರಸಂದ್ರ ಗೇಟ್ ಬಳಿ ಗುರುವಾರ ಮದ್ಯಾಹ್ನ ನಡೆದಿದೆ.
ಬೆಂಗಳೂರಿನಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿದ ಯುವಕ ಶ್ರೀನಿವಾಸ್ (25) ಮೃತಪಟ್ಟ ಸವಾರ. ಇವರು ತಮ್ಮ ಸ್ವಗ್ರಾಮ ನಲ್ಲರಾಳ್ಳಪಲ್ಲಿ ಕ್ರಾಸ್ಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಆಗ ಕೆಳಗೆ ಬಿದ್ದ ಶ್ರೀನಿವಾಸ್ ಮೇಲೆ ಬಸ್ ಹಾದು ಹೋಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.